ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ನಗರದಲ್ಲಿ ಸಂಯುಕ್ತ ರೈತ ಮೋರ್ಚಾದ ಕಾರ್ಯಕರ್ತರು ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಮುಖ್ಯ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ ರೈತ ಸಂಘಟನೆಯ ಕಾರ್ಯಕರ್ತರು, ಕೇಂದ್ರ ಬಿಜೆಪಿ ಸರ್ಕಾರ ದೇಶದ ರೈತರನ್ನು ಕಾರ್ಪೋರೇಟರ್ಗಳಿಗೆ ಅಡಿಯಾಳು ಮಾಡಲು ಹೊರಟಿದೆ. ಅಲ್ಲದೆ ಕೇಂದ್ರ ಸರ್ಕಾರ ಕಾಯ್ದೆ ಮಂಡನೆ ಮಾಡಿ ತಾವು ರೈತರಿಗೆ ಏನು ಒಳ್ಳೆಯದನ್ನು ಮಾಡುತ್ತಿದ್ದೇವೆ ಎಂದು ಹೇಳಿ ಜಾರಿ ಮಾಡಬಹುದಾಗಿತ್ತು. ಆದರೆ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಸರ್ಕಾರ ದೆಹಲಿಯಲ್ಲಿ ರೈತರು ಕಳೆದ 3 ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ಮಾಡ್ತಾ ಇದೆ. ಪ್ರತಿಭಟನೆ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ನಡೆಯುತ್ತಿದೆ ಎಂದು ಸುಳ್ಳು ಹೇಳುತ್ತಿದೆ. ದೇಶದ ಎಲ್ಲಾ ಕಡೆಗಳಲ್ಲಿಯೂ ಧರಣಿ ನಡೆಯುತ್ತಿದೆ ಎಂದು ತೋರಿಸಲು ರೈಲು ತಡೆ ಚಳುವಳಿ ನಡೆಸಲಾಗುತ್ತಿದೆ ಎಂದರು.
ಓದಿ: ದೇಶಾದ್ಯಂತ ರೈಲ್ ರೋಖೋ: ಧಾರವಾಡ, ತುಮಕೂರು, ಬೆಳಗಾವಿಯಲ್ಲಿ ರೈತರು ಪೊಲೀಸ್ ವಶಕ್ಕೆ.. LIVE UPDATES
ಜಿಲ್ಲೆಯಲ್ಲಿ ಮಧ್ಯಾಹ್ನ ರೈಲು ಸಂಚಾರವಿಲ್ಲದ ಕಾರಣ ರೈತರು ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟಿಸಿ ನಿಲ್ದಾಣದ ಒಳಗೆ ಹೋಗಲು ಯತ್ನಿಸಿದರು. ಈ ವೇಳೆ ರೈತರನ್ನು ತಡೆಯಲು ಪೊಲೀಸರು ಮುಂದಾದಾಗ ಕೆಲಕಾಲ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ರೈಲು ನಿಲ್ದಾಣದ ಒಳಗೆ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ಕೊಟ್ಟ ನಂತರ ಟಿಕೆಟ್ ಕೌಂಟರ್ ಬಳಿ ಪ್ರತಿಭಟನೆ ನಡೆಸಿದರು.