ಶಿವಮೊಗ್ಗ: ಉಂಬ್ಳೆಬೈಲಿನ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇಂದು ಬೆಳಗಿನ ಜಾವ ಉಂಬ್ಳೆಬೈಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುರುಳಿಹಳ್ಳಿ ಗ್ರಾಮದಲ್ಲಿದೆ ಅಡಿಕೆ ತೋಟ ಹಾಗೂ ಭತ್ತದ ಗದ್ದೆಗೆ ನುಗ್ಗಿ ಬೆಳೆಯನ್ನು ನಾಶ ಮಾಡಿದೆ.
ಹುರುಳಿಹಳ್ಳಿ ಗ್ರಾಮದ ರೈತ ಮಂಜಣ್ಣನವರ ಅಡಿಕೆ ತೋಟಕ್ಕೆ ನುಗ್ಗಿ ಅಡಿಕೆ ಹಾಗೂ ತೆಂಗಿನ ಮರವನ್ನು ಮುರಿದು ಹಾಕಿದೆ. ಅದೇ ರೀತಿ ಇನ್ನೂರ್ವ ರೈತ ಕೃಷ್ಣಪ್ಪ ರವರ ಭತ್ತದ ಗದ್ದೆಗೆ ನುಗ್ಗಿ ಭತ್ತದ ಪೈರನ್ನು ತುಳಿದು ಹಾಕಿದೆ. ಸಾಲ ಮಾಡಿ ಬೆಳೆ ಬೆಳೆದ ರೈತರು ಬೆಳೆ ಹಾನಿಯಿಂದ ತಲೆ ಮೇಲೆ ಕೈ ಹೂತ್ತು ಕುಳಿತುಕೊಳ್ಳುವಂತೆ ಆಗಿದೆ.
ಉಂಬ್ಳೆಬೈಲು ಗ್ರಾಮ ಪಂಚಾಯತ್ ಭದ್ರಾ ಹಿನ್ನಿರಿನ ಪ್ರದೇಶದಲ್ಲಿ ಬರುವ ಗ್ರಾಮಗಳಾಗಿವೆ. ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಕಾಡಾನೆ ಎರಡನೇ ಬಾರಿ ಗ್ರಾಮದ ತೋಟಗಳಿಗೆ ನುಗ್ಗಿದೆ. ಸದ್ಯ ಕಾಡಾನೆ ಯಾವುದೇ ಪ್ರಾಣಹಾನಿ ಮಾಡಿಲ್ಲ. ಆನೆ ಗ್ರಾಮಗಳತ್ತ ಬಾರದಂತೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಹಾಗೂ ಹಾನಿಗಿಡಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.