ಶಿವಮೊಗ್ಗ : ಬಿಜೆಪಿ ಅನ್ನಿಸಿಕೊಳ್ಳಲು ಮಾತ್ರ ಇಲ್ಲ. ನಮ್ಮ ಪಕ್ಷ ಯಾವುದೇ ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧ ಹಗುರವಾದ ಟೀಕೆ ಮಾಡಿಲ್ಲ. ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರನ್ನು ದುರ್ಗೆಗೆ ಅಟಲ್ ಬಿಹಾರಿ ವಾಜಪೇಯಿ ಹೋಲಿಸಿದ್ದರು. ಅಲ್ಲದೆ ನಾವು ಇಂದಿರಾ ಗಾಂಧಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು.
ಈಗಿನ ಕಾಂಗ್ರೆಸ್ ಸ್ಥಿತಿ ಏನು, ವಿಶ್ವವೇ ಮೆಚ್ಚಿರುವ ನರೇಂದ್ರ ಮೋದಿ ಅವರ ಬಗ್ಗೆ ಹೆಬ್ಬೆಟ್ಟಿನ ಗಿರಾಕಿ ಅಂತಾ ಸೊಕ್ಕಿನ ಮಾತನ್ನು ಹೇಳುತ್ತಾರಲ್ಲಾ, ನಾವೆಲ್ಲಾ ಮಂಡಕ್ಕಿ ತಿನ್ನುತ್ತಾ ಕೂರಬೇಕಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ : ದೇಶದ, ಪ್ರಪಂಚದ ಎಲ್ಲಾ ಜನರಿಗೆ ನೋವಾಗಿದೆ. ರಾಹುಲ್ ಗಾಂಧಿ ಬಗ್ಗೆ ಡ್ರಗ್ಸ್ ಪೆಡ್ಲರ್ ಅಂತಾ ಹೇಳುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ. ಹೆಬ್ಬಟ್ ಗಿರಾಕಿ ಅಂತಾ ಹೇಳಿದ ಸಿದ್ದರಾಮಯ್ಯನವರಿಗೆ ಹಾಗೂ ಕಾಂಗ್ರೆಸ್ ನಾಯಕರಿಗೆ ನಿಮ್ಹಾನ್ಸ್ಗಿಂತ ಬೇರೆ ಆಸ್ಪತ್ರೆ ಹುಡುಕಿದ್ರೂ ಹುಚ್ಚು ವಾಸಿಯಾಗಲ್ಲ ಎಂದರು.
ನಾವೆಂದೂ ರಾಷ್ಟ್ರೀಯ ನಾಯಕರಿಗೆ ಈ ರೀತಿಯ ಪದ ಬಳಸಿದವರಲ್ಲ. ನರೇಂದ್ರ ಮೋದಿ ಅವರಿಗೆ ಹೆಬ್ಬಟ್‌ಗಿರಾಕಿ ಅಂತಾ ಹೇಳುವ ಸೊಕ್ಕು, ಧಿಮಾಕು ನಿಮಗೆ ಇರಬೇಕಾದ್ರೆ, ರಾಜ್ಯದ ಅಧ್ಯಕ್ಷರು ಉತ್ತರ ನೀಡಿದ್ದಾರೆ. ನಮ್ಮ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಮುಂದೆ ಮಾತನಾಡಿದ್ರೆ, ಹಗುರವಾಗಿ ಮಾತನಾಡಿದ್ರೆ ಇನ್ನೂ ಬೇರೆ ಬೇರೆ ಪದಗಳನ್ನು ಬಳಸಬೇಕಾಗುತ್ತದೆ. ನರೇಂದ್ರ ಮೋದಿ ಬಗ್ಗೆ ಹೇಳಿದ ಸಿದ್ದರಾಮಯ್ಯನವರು ದೇಶದ ಜನತೆ ಎದುರು ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷವನ್ನು ಕುಂಟನಿಗೆ ಹೋಲಿಸಿದ ಈಶ್ವರಪ್ಪ : ಜೆಡಿಎಸ್ ಏನೂ ಮಾಡಲಾಗದ ಪಕ್ಷವಾಗಿದೆ. ಒಬ್ಬ ಕುಂಟ ಇರುತ್ತಾನೆ, ಅವನ ಕೈಯಲ್ಲಿ ಏನೂ ಮಾಡಲು ಆಗಲ್ಲ. ಆದರೆ, ನಾನು ಎದ್ದು ಬಂದು ಒದೆಯುತ್ತೇನೆ ಎಂದು ಹೇಳುತ್ತಾನೆ. ಈ ಸ್ಥಿತಿ ಜೆಡಿಎಸ್ ಪಕ್ಷದ್ದಾಗಿದೆ ಎಂದರು.
ಆರ್ಎಸ್ಎಸ್ ಈಗ ವಿಶ್ವದಾದ್ಯಂತ ಬೆಳೆದ ಸಂಘಟನೆಯಾಗಿದೆ. ಸಂಸ್ಕೃತಿ ಬೆಳೆಸುವ ದೊಡ್ಡ ಸಂಸ್ಥೆಯಾಗಿದೆ. ಸೂರ್ಯನಂತೆ ಆರ್ಎಸ್ಎಸ್ ಇದೆ. ಸೂರ್ಯನಿಗೆ ಉಗಳಿದರೆ ಅದು ಅವರಿಗೆ ವಾಪಸ್ ಬರುತ್ತದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರು ಆರ್ಎಸ್ಎಸ್ನ ಒಂದು ಕೂದಲು ಅಲುಗಾಡಿಸಲು ಆಗಲ್ಲ ಎಂದರು.
ಕಾಂಗ್ರೆಸ್ ದಿನೇದಿನೆ ಪ್ರಾದೇಶಿಕ ಪಕ್ಷವಾಗುತ್ತಿದೆ : ದೇವೇಗೌಡರು ತಮ್ಮ ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲಿ, ನಮ್ಮ ಅಭ್ಯಂತರವಿಲ್ಲ. ಆದರೆ, ಅವರ ಪಕ್ಷದವರು ಓಡೋಡಿ ಬಂದ್ರೆ ಏನು ಮಾಡುವುದು? ಇಂದು ಕಾಂಗ್ರೆಸ್ ದಿನೇದಿನೆ ಪ್ರಾದೇಶಿಕ ಪಕ್ಷವಾಗುತ್ತಿದೆ. ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಉಗ್ರಪ್ಪ ಹಾಗೂ ಸಲೀಂ ಮಾತನಾಡಿದ್ದ ಪ್ರಕರಣದಲ್ಲಿ ಪಾಪ ಸಲೀಂ ಅವರನ್ನು ವಜಾ ಮಾಡಿದ್ರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾದ ಪಕ್ಷ ಅಲ್ವಾ?. ಆದರೆ, ಸಲೀಂ ಅವರನ್ನು ವಜಾ ಮಾಡಿದ್ದು ಯಾಕೆ? ಉಗ್ರಪ್ಪ ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಉಗ್ರಪ್ಪ ಸಿದ್ದರಾಮಯ್ಯ ಅವರ ಶಿಷ್ಯ ಅಂತಾ ಏನೂ ಮಾಡಲಿಲ್ವಾ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದೆ. ಇದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಛಿದ್ರ ಛಿದ್ರವಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯನವರು ಆರ್ಎಸ್ಎಸ್ ಬೈಯ್ದರೆ, ದೊಡ್ಡವರಾಗುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಭರವಸೆ : ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಯಡಿಯೂರಪ್ಪನವರು ಸಿಎಂ ಆಗಿ ಮಾಡಿದ ಅಭಿವೃದ್ದಿ ಕೆಲಸ ಹಾಗೂ ಸಿಎಂ ಬಸವರಾಜ ಬೊಮ್ಮಯಿ ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಓದಿ: ನಳಿನ್ ಕುಮಾರ್ ಕಟೀಲ್ಗೆ ತಲೆ ಕೆಟ್ಟಿದೆ ಆಸ್ಪತ್ರೆಗೆ ಸೇರಿಸಿ: ಕಾಂಗ್ರೆಸ್ ನಾಯಕರ ಆಕ್ರೋಶ