ಶಿವಮೊಗ್ಗ: '' ಅಂತಹ ಸಂದರ್ಭ ಬಂದರೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ನಾವು ಜೈಲಿಗೆ ಹಾಕುವವರೇ, ಆದರೆ ಅದೆಲ್ಲದಕ್ಕೂ ಸಮಯ ಬರಬೇಕು. ಎಲ್ಲವನ್ನು ಒಂದೇ ಸಲ ಮಾಡಲು ಆಗಲ್ಲ'' ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು. ಇಲ್ಲಿನ ಪ್ರೆಸ್ಟ್ರಸ್ಟ್ನಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ''ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಹಗರಣದಲ್ಲಿ ಭಾಗಿದ್ದಾರೆ ಎಂದು ನ್ಯಾಯಮೂರ್ತಿ ಕೆಂಪಣ್ಣನವರು ವರದಿ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಈಗ ಜಾಮೀನಿನ ಮೇಲೆ ಇದ್ದಾರೆ. ಅವರು ಯಾವಾಗ ಒಳಗೆ ಹೋಗ್ತಾರೆ ಗೊತ್ತಿಲ್ಲ'' ಎಂದರು.
ಸುರ್ಜೆವಾಲಾ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ: ಸುರ್ಜೆವಾಲಾ ಅವರಿಗೆ ದೇಶದ ಕಾನೂನಿನ ಬಗ್ಗೆ ಗೌರವ ಇಲ್ಲ ಎಂದೆನ್ನಿಸುತ್ತದೆ. ಸಂತೋಷ್ ಪಾಟೀಲ ಸಾವಿನ ವಿಚಾರ ಬಂದಾಗ ನಾನು ರಾಜೀನಾಮೆ ಘೋಷಣೆ ಮಾಡಿದೆ. ಅಮಿತ್ ಷಾ ಅವರು ರಾಜೀನಾಮೆ ನೀಡಿ ಎಂದು ಹೇಳಿದರು. ಸಂತೋಷ್ ಸಾವಿನ ವಿಚಾರದಲ್ಲಿ ನನಗೆ ಕ್ಲೀನ್ ಚಿಟ್ ನೀಡಿದೆ. ಕಾಂಗ್ರೆಸ್ನವರು ಕ್ಲೀನ್ ಚಿಟ್ ಬಂದ ಮೇಲೆ ರಾಜಕೀಯ ಮಾಡಲು ಈಗ ಟೀಕೆ ಮಾಡುವುದು ಸರಿಯಲ್ಲ. ಮೋದಿ ವಿಚಾರದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದೆ. ಅದರ ಬಗ್ಗೆ ನೀವು ಪ್ರತಿಭಟನೆ ನಡೆಸುತ್ತಿರಿ. ಆದರೆ, ನನಗೆ ಕ್ಲೀನ್ ಚೀಟ್ ನೀಡಿದ ಮೇಲೆ ಮಾತನಾಡುವುದು ಎಷ್ಟು ಸರಿ ಎಂದು ಸುರ್ಜೆವಾಲಾ ಅವರಿಗೆ ತೀರುಗೇಟು ನೀಡಿದರು.
ಜಗದೀಶ್ ಶಟ್ಟರ್ ಪಕ್ಷ ಬಿಟ್ಟಿದ್ದು ಆಘಾತ: ಜಗದೀಶ್ ಶಟ್ಟರ್ ಅವರು ನಮ್ಮ ಪಕ್ಷವನ್ನು ಬಿಟ್ಟಿದ್ದು ನನಗೆ ಅಘಾತವನ್ನುಂಟು ಮಾಡಿತ್ತು. ನಂತರ ನಾನು ಶೆಟ್ಟರ್ಗೆ ಬಹಿರಂಗ ಪತ್ರ ಬರೆದಿದ್ದೆ ಎಂದರು.
ಪಕ್ಷದ ಹಿರಿಯರು ಹೇಳಿದಂತೆ ಚುನಾವಣಾ ಕಣದಿಂದ ಹಿಂದಕ್ಕೆ: ನಮ್ಮ ಕೇಂದ್ರದ ನಾಯಕರಾದ ಧರ್ಮೆಂದ್ರ ಪ್ರಧಾನ್, ಸಂತೋಷ್ ಜೀ ಹಾಗೂ ನಡ್ಡಾ ಅವರು ನನಗೆ ಚುನಾವಣೆ ನಿಲ್ಲುವುದು ಬೇಡ ಅಂದ್ರು ನಾನು, ಅದನ್ನೇ ಮಾಡಿದೆ. ಪತ್ರವನ್ನು ನಾನು ಬಿಡುಗಡೆ ಮಾಡಲಿಲ್ಲ. ಕೇಂದ್ರದವರು ಪತ್ರ ಬಹಿರಂಗ ಮಾಡಿದ್ದರು. ಇದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರಿಗೆ ನಾನು ಸಮಾಧಾನ ಮಾಡಿದೆ. ಕೇಂದ್ರದ ನಾಯಕರಿಗೆ ನಾನು ರಾಜೀನಾಮೆ ನೀಡಿದ್ದು, ಕಾರ್ಯಕರ್ತರಿಗೆ ಸಮಾಧಾನ ಮಾಡಿದ್ದು, ಪಕ್ಷ ಸೂಚಿಸಿದ ಆದೇಶವನ್ನು ಪಾಲಿಸಿದ್ದೇನೆ. ನಮ್ಮ ಮನೆಗೆ ಪರಿವಾರದವರು ಮುಖಂಡರು ಬಂದು ನನ್ನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನಾನು ಪಕ್ಷದ ಸಿಪಾಯಿ ಎಂದರು.
ನಮ್ಮ ಪಕ್ಷದಲ್ಲಿ ಜಾತಿ ಪ್ರಶ್ನೆ ಇಲ್ಲವೇ ಇಲ್ಲ. ಕಾಂಗ್ರೆಸ್ನ ಡಿಕೆಶಿ ನನ್ನ ಹಿಂದೆ ಎಲ್ಲಾ ಒಕ್ಕಲಿಗರು ಇರಬೇಕು. ನನ್ನನ್ನು ಸಿಎಂ ಮಾಡಿ ಎಂದು ಹೇಳಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಜಾತಿ ಹಿಂದೆ ಬಿದ್ದಿದ್ದಾರೆ. ಸಿದ್ದರಾಮಯ್ಯ ದಲಿತರು, ಹಿಂದುಳಿದವರ ಹೆಸರಿನಲ್ಲಿ ರಾಜಕಾರಣ ಮಾಡಿದರು. ನಾನು ರಾಯಣ್ಣ ಬ್ರಿಗೇಡ್ ಮಾಡಿದ್ದು ದಲಿತರು ಹಿಂದೂಳಿದವರನ್ನು ಜಾಗೃತ ಮಾಡಲು ಎಂದು ಸಮಜಾಯಿಷಿ ನೀಡಿದರು. ಪಕ್ಷಾಂತರವನ್ನು ಉಗ್ರವಾಗಿ ವಿರೋಧಿಸುತ್ತೇನೆ. ಹಿಂದೆ ಕಾಂಗ್ರೆಸ್ ಬಲಿಷ್ಠ ಪಕ್ಷವಾಗಿತ್ತು. ಹಿಂದೆ ಬಿ ಫಾರಂ ತಂದರೆ ಗೆದ್ದರು ಎಂಬ ಭಾವನೆ ಇತ್ತು. 1992ರಲ್ಲಿ ನಾನು ರಾಜ್ಯಾಧ್ಯಕ್ಷರಾಗಿದ್ದಾಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಜನ ಸಿಗಲಿಲ್ಲ. 116 ಜನರನ್ನು ಮಾತ್ರ ಸ್ಪರ್ಧೆ ಮಾಡಿಸಿದ್ವಿ. ಆಗ ಅರ್ಧದಷ್ಟು ಜನ ಠೇವಣಿ ಕಳೆದು ಕೊಂಡಿದ್ದರು.
ನಾವು ಸತ್ಯಹರಿಶ್ಚಂದ್ರಲ್ಲ: ನಾವು ಸತ್ಯ ಹರಿಶ್ಚಂದ್ರರಲ್ಲ. ಕಾಂಗ್ರೆಸ್ನವರು ನಿಮ್ಮ ಪಕ್ಷಕ್ಕೆ ಬರ್ತಿವಿ ಅಂದಾಗ ಬೇಡ ಎನ್ನುವುದಕ್ಕೆ ಆಗಲ್ಲ. ನಾವು ಅಧಿಕಾರಕ್ಕಾಗಿ ಕರೆದು ಕೊಂಡು ಬಂದಿದ್ದೇವೆ. ಅಧಿಕಾರವನ್ನು ನೈತಿಕತೆಯಿಂದ ನಡೆಸಬೇಕು ಎಂದರು.
ನನ್ನ ಮಗನ ಭವಿಷ್ಯದ ಬಗ್ಗೆ ಚಿಂತನೆ: ನಮ್ಮ ಪಕ್ಷದಲ್ಲಿ ಒಂದು ಕೋಟಿ ಸದಸ್ಯರಿದ್ದಾರೆ. ಅವರ ಭವಿಷ್ಯ ಏನು ಅಂತ ಯೋಚನೆ ಮಾಡುವುದು ಅಲ್ಲ. ಯಾರಿಗೆ ಏನೂ ಸಿಗಬೇಕು ಅದರ ಬಗ್ಗೆ ಸಂಘಟನೆ ಯೋಚನೆ ಮಾಡಬೇಕಾಗುತ್ತದೆ. ಅದೇ ರೀತಿ ನನ್ನ ಮಗನ ಭವಿಷ್ಯದ ಚಿಂತನೆ ಕೂಡಾ ಮಾಡುತ್ತೇನೆ ಎಂದು ಅವರು ತಿಳಿಸಿದರು. ನಮ್ಮಲ್ಲೂ ಎಲ್ಲ ಸಹ ಸರಿಯಾಗಿದೆ ಎಂದು ಹೇಳುವುದಕ್ಕೆ ನಾನು ಹೋಗಲ್ಲ ಎಂದ ಅವರು, ಪರಿವಾರದವರು ನಮ್ಮ ಸೊಸೆ ಹಾಗೂ ಮಕ್ಕಳನ್ನು ಚುನಾವಣೆಗೆ ನಿಲ್ಲಿಸಲು ಕೇಳಿದಾಗ ನಾನೇ ಬೇಡ ಎಂದೆ, ಅವರಿಗೆ ಅಡುಗೆ ಮಾಡಲು, ಪೂಜೆ ಮಾಡಲು ಹಾಗೂ ದೇವಾಲಯಕ್ಕೆ ಹೋಗುವುದು ಅಷ್ಟೆ ಗೂತ್ತು. ಅವರನ್ನು ಕೇಳಿದೆ, ಅವರು ಬೇಡ ಅಂದ್ರು ಎಂದು ಈಶ್ವರಪ್ಪ ಇದೇ ವೇಳೆ ಸ್ಪಷ್ಟಪಡಿಸಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾರ್ಯಕರ್ತನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಿಗೇರಿ, ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ ಇದ್ದರು.
ಇದನ್ನೂ ಓದಿ: ಬಿಜೆಪಿ ಮತ್ತು ಆರ್ಎಸ್ಎಸ್ನವರು ನನ್ನನ್ನು ರಾಜಕೀಯ ದ್ವೇಷದಿಂದ ಸೋಲಿಸಬೇಕೆಂದು ನಿಂತಿದ್ದಾರೆ: ಸಿದ್ದರಾಮಯ್ಯ