ಶಿವಮೊಗ್ಗ : ರಾಜ್ಯದ ಆನೆ ಬಿಡಾರಗಳಲ್ಲಿ ಪ್ರಸಿದ್ದಿ ಪಡೆದಿರುವ ಶಿವಮೊಗ್ಗ ತಾಲೂಕು ಸಕ್ರೆಬೈಲು ಆನೆ ಬಿಡಾರದಿಂದ ಯಾವುದೇ ಆನೆಯೂ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತಿಲ್ಲ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಪಟಗಾರ ತಿಳಿಸಿದರು.
ಈ ಬಾರಿಯ ದಸರಾದಲ್ಲಿ ಹೊಸ ಆನೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಮೂಲಕ ರಾಜ್ಯದ ಆನೆ ಬಿಡಾರಗಳಲ್ಲಿ ದಸರಾದಲ್ಲಿ ಭಾಗಿಯಾಗಬಹುದಾದ ಆನೆಗಳ ಹುಡುಕಾಟ ಪ್ರಾರಂಭಿಸಿದೆ. ಕಳೆದ ವಾರ ಕೆಲವು ಅಧಿಕಾರಿಗಳು ಸಕ್ರೆಬೈಲಿಗೆ ಭೇಟಿ ನೀಡಿ ಆನೆಗಳ ಪರಿಶೀಲನೆ ನಡೆಸಿದ್ದರು.
ನಂತರ ಅಧಿಕಾರಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ, ರಾಜ್ಯದ ಎಲ್ಲ ಆನೆ ಬಿಡಾರಗಳ ಆನೆಗಳ ಮಾಹಿತಿ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಸಕ್ರೆಬೈಲು ಆನೆ ಬಿಡಾರದ ಸಾಗರ ಹಾಗೂ ನೇತ್ರಾವತಿ ಆನೆಗಳನ್ನು ಮೈಸೂರಿಗೆ ಕಳುಹಿಸಿಕೊಡುವಂತೆ ಕೇಳಿದ್ದರು. ಆದರೆ ಸಕ್ರೆಬೈಲಿನಿಂದ ಯಾವ ಆನೆಯನ್ನೂ ಮೈಸೂರಿಗೆ ಕಳುಹಿಸುತ್ತಿಲ್ಲ.
ಜಂಬೂ ಸವಾರಿಯಂತೆ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಪ್ರತಿ ವರ್ಷ ದಸರಾ ಆಚರಣೆ ನಡೆಯುತ್ತದೆ. ಇಲ್ಲಿ ಆನೆಯ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯ ಭವ್ಯ ಮೆರವಣಿಗೆ ನಡೆಯುತ್ತದೆ. ಇದಕ್ಕಾಗಿ ಸಕ್ರೆಬೈಲಿನಲ್ಲಿ ಮೂರು ಆನೆಗಳ ತಾಲೀಮು ನಡೆಸಲಾಗುತ್ತದೆ. ಇದಾದ ನಂತರ ಶಿವಮೊಗ್ಗ ದಸರಾದಲ್ಲಿ ಆನೆಗಳು ಪಾಲ್ಗೊಳ್ಳುತ್ತವೆ. ಮೈಸೂರು ದಸರಾಗೆ ಆನೆಗಳನ್ನು ಕಳುಹಿಸಿದರೆ ಶಿವಮೊಗ್ಗ ದಸರಾಗೆ ಆನೆಗಳು ಇರುವುದಿಲ್ಲ ಎಂದು ಆನೆಗಳನ್ನು ಕಳುಹಿಸದೇ ಇರಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದೇ ಮೊದಲ ಬಾರಿಗೆ ಮೈಸೂರು ದಸರಾಗೆ ಆನೆಗಳು ಬೇಕೆಂದು ಸಕ್ರೆಬೈಲು ಆನೆ ಬಿಡಾರಕ್ಕೆ ಅಧಿಕಾರಿಗಳು ಆಗಮಿಸಿದ್ದರು ಎಂದು ಪ್ರಸನ್ನ ಪಟಗಾರ ಮಾಹಿತಿ ನೀಡಿದರು.
ಸಾಗರ, ನೇತ್ರಾವತಿ ಆನೆಗಳಿಗೆ ಬೇಡಿಕೆ: ಸಕ್ರೆಬೈಲು ಆನೆ ಬಿಡಾರದ ಸಾಗರ ಹಾಗೂ ನೇತ್ರಾವತಿ ಆನೆಗಳು ಕಳೆದ ಐದು ವರ್ಷಗಳಿಂದ ಶಿವಮೊಗ್ಗದ ದಸರಾದಲ್ಲಿ ಭಾಗಿಯಾಗುತ್ತಿವೆ. ಇವೇ ಆನೆಗಳನ್ನು ಮೈಸೂರು ದಸರಾಗೆ ಬೇಕೆಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗಾಗಲೇ ಸಾಗರ ಹಾಗೂ ನೇತ್ರಾವತಿ ಆನೆಗಳು ಶಿವಮೊಗ್ಗ ದಸರಾದಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸುತ್ತಿವೆ.
ಈ ಆನೆಗಳು ಮೈಸೂರಿಗೆ ಹೋಗಿ ಅಲ್ಲಿನ ತಾಲಿಮು ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ಬೇಕಾಗಿರುವುದರಿಂದ ಅನೆಗಳನ್ನು ಕಳುಹಿಸುತ್ತಿಲ್ಲ. ಕಳೆದ ಒಂದೆರಡು ವರ್ಷಗಳಿಂದ ಆನೆ ಬಿಡಾರಕ್ಕೆ ಬಾಲಣ್ಣ, ನಾಗಣ್ಣ ಆನೆಗಳು ಬಂದಿವೆ. ಇವುಗಳಿಗೂ ಸಹ ಸರಿಯಾದ ತಾಲೀಮು ಸಿಕ್ಕರೆ ಮುಂದಿನ ವರ್ಷ ಮೈಸೂರು ದಸರಾದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಈ ಸಲ ಮೈಸೂರು ದಸರಾದಲ್ಲಿ ಯಾವ ಆನೆಗಳೂ ಭಾಗಿಯಾಗುತ್ತಿಲ್ಲ ಎಂದು ಪ್ರಸನ್ನ ಪಟಗಾರ ಹೇಳಿದರು.
ಇದನ್ನೂ ಓದಿ : Mysore Dasara-2023.. ಪೂರ್ವಭಾವಿ ಸಭೆ: ಈ ಬಾರಿಯೂ ಅದ್ಧೂರಿ ದಸರಾ ಉತ್ಸವ ಆಚರಣೆ- ಸಚಿವ ಮಹದೇವಪ್ಪ