ಶಿವಮೊಗ್ಗ: ರಂಗಾಯಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜನವರಿ 25ರಂದು ನಾಟಕ ಪ್ರದರ್ಶನ ಹಾಗೂ ಜ.26ರಂದು ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 25ರಂದು ವೀರು ಥಿಯೇಟರ್ ಟ್ರಸ್ಟ್ನ ಮೈಸೂರು ಕಲಾವಿದರು ಅಭಿನಯಿಸಿರುವ ಶ್ರವಣ ಹೆಗ್ಗೋಡು ನಿರ್ದೇಶನದ 'ಪ್ಲಾಸ್ಟಿ ಸಿಟಿ' ನಾಟಕ ಪ್ರದರ್ಶನ ಬೆಳಗ್ಗೆ 11 ಗಂಟೆಗೆ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯಲಿದೆ ಹಾಗೂ ಅದೇ ನಾಟಕ ಪ್ರದರ್ಶನವನ್ನು ಸಂಜೆ 6:30ಕ್ಕೆ ಸಾರ್ವಜನಿಕರಿಗಾಗಿ ಆಯೋಜಿಸಲಾಗುವುದು ಎಂದರು.
ಈ ನಾಟಕದ ಕಥಾವಸ್ತು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಗಂಡಾಂತರ ಕುರಿತಾಗಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನಾಗರಿಕರ ಜವಾಬ್ದಾರಿ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಶಾಲಾ ಮಕ್ಕಳಿಗೆ ಪ್ರದರ್ಶನ ಉಚಿತವಾಗಿರುತ್ತೆ. ಸಾರ್ವಜನಿಕರಿಗೆ 20 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ನಿರ್ದೇಶಕರು ಈ ನಾಟಕದಲ್ಲಿ ಜಪಾನಿನ ಸಾಂಪ್ರದಾಯಿಕ ಗೊಂಬೆಯಾಟ ಬುನ್ರಾಖು ಮಾದರಿ ಅನುಸರಿಸಿದ್ದಾರೆ. ಅವರು ಈಗಾಗಲೇ ತಮ್ಮ ಎರಡು ಪಪೆಟ್ ನಾಟಕಗಳನ್ನು ಟರ್ಕಿ, ಚೀನಾ ಮುಂತಾದ ದೇಶಗಳಲ್ಲಿ ಪ್ರದರ್ಶಿಸಿದ್ದಾರೆ. ಶಿವಮೊಗ್ಗ ರಂಗಾಸಕ್ತರಿಗೆ ಈ ನಾಟಕ ವೀಕ್ಷಣೆ ಉತ್ತಮ ಅವಕಾಶ ಎಂದರು.
ಉಚಿತ ಚಲನಚಿತ್ರ ಪ್ರದರ್ಶನ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜನವರಿ 26ರಂದು ಶಿವಮೊಗ್ಗ ರಂಗಾಯಣದಲ್ಲಿ ಉಚಿತ ಚಲನಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಭಾನುವಾರ ಬೆಳಗ್ಗೆ 11ಗಂಟೆಗೆ ಖ್ಯಾತ ರಿಚರ್ಡ್ ಅಟೆನ್ ಬರೊ ನಿರ್ದೇಶನದ ‘ಗಾಂಧಿ’ ಚಿತ್ರಪ್ರದರ್ಶನ ಹಾಗೂ ಸಂಜೆ 5ಗಂಟೆಗೆ ಡಾ.ಜಬ್ಬಾರ್ ಪಟೇಲ್ ನಿರ್ದೇಶನದ ‘ಡಾ.ಬಿ ಆರ್ ಅಂಬೇಡ್ಕರ್’ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ಪ್ರದರ್ಶನ ಹಾಗೂ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.