ಶಿವಮೊಗ್ಗ : ಮಾನವನ ಜೀವನಕ್ಕೆ ಭದ್ರತೆ ಮತ್ತು ಬದ್ಧತೆ ಬೇಕು. ಕೃಷಿಯಿಂದ ಈ ಎರಡೂ ಸಾಧ್ಯವಾಗಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು (Dr. sri shivamurthy murugha sharanaru) ತಿಳಿಸಿದ್ದಾರೆ.
ನಗರದಲ್ಲಿಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು ಜಂಟಿಯಾಗಿ ಇಂದು ಮತ್ತು ನಾಳೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ನವುಲೆ ಶಿವಮೊಗ್ಗ ಇಲ್ಲಿ ಕೃಷಿ ಮೇಳ ( krishi mela) ಆಯೋಜಿಸಿವೆ. ಇಲ್ಲಿ ಕಳಸಕ್ಕೆ ಭತ್ತ ತುಂಬುವ ಮೂಲಕ ಉದ್ಘಾಟಿಸಿ, ಆಶೀರ್ವಚನ ನೀಡಿ ಅವರು ಮಾತನಾಡಿದರು.
'ಯಾವ ದೇಶದಲ್ಲಿ ಕೃಷಿ ಜೀವನ ಅಭದ್ರತೆಯಿಂದ ಕೂಡಿರುತ್ತದೋ, ಅಂತಹ ದೇಶದ ಭವಿಷ್ಯ ಉಜ್ವಲವಾಗಿರುವುದಿಲ್ಲ. ಕೃಷಿ ಪ್ರಧಾನ ಜೀವನದಲ್ಲಿ ನಿರಂತರ ಭದ್ರತೆಯಂತೂ ಇದ್ದೇ ಇರುತ್ತದೆ. ಆವಿಷ್ಕಾರ, ತಂತ್ರಜ್ಞಾನದಿಂದ ಆಹಾರಧಾನ್ಯ ಉತ್ಪಾದಿಸಲು ಸಾಧ್ಯವಿಲ್ಲ. ಭೂಮಿಯ ಮೂಲಕ ಆಹಾರೋತ್ಪನ್ನ ಸಾಧ್ಯ. ನಮ್ಮದು ಭೂಮಿ ಆಧಾರಿತ ಬದುಕು. ಭೂಮಿ ಅಥವಾ ಜಮೀನು ಬಿಟ್ಟರೆ ಬದುಕೇ ಇಲ್ಲ' ಎಂದರು.
ರಾಗಿ-ಸಿರಿಧಾನ್ಯ ಬಳಸಿ: ರಾಗಿ ತಿಂದು ನಿರೋಗಿಯಾಗು ಎನ್ನುವ ನುಡಿಯಂತೆ ನಾವೆಲ್ಲ ದಿನಕ್ಕೆ ಒಮ್ಮೆಯಾದರೂ ರಾಗಿಯಿಂದ ತಯಾರಿಸಿದ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಪದಾರ್ಥ ಸೇವಿಸಬೇಕು. ನಾನು ದಿನವೂ ಒಂದು ಹೊತ್ತು ರಾಗಿ ಅಥವಾ ಸಿರಿಧಾನ್ಯ ಸೇವಿಸುತ್ತೇನೆ. ಸಿರಿಧಾನ್ಯ ಸೇವನೆಯಿಂದ ವೈದ್ಯರನ್ನು ದೂರವಿಟ್ಟು ಬದುಕು ಹಸನು ಮಾಡಬಹುದು ಎಂದು ತಿಳಿಸಿದರು.
![shivamogga](https://etvbharatimages.akamaized.net/etvbharat/prod-images/kn-smg-02-krushimela-swamiji-avb-7204213_12112021153817_1211f_1636711697_294.jpg)
ಜೀವನಶೈಲಿ ಬದಲಾಯಿಸಿಕೊಳ್ಳಿ : ಆಧುನಿಕ, ಕೃತಕ ಮತ್ತು ಯಾಂತ್ರೀಕೃತ ಬದುಕಿನಿಂದ ಮುಕ್ತಿ ಹೊಂದಲು ನಾವು ಕಡ್ಡಾಯವಾಗಿ ನಮ್ಮ ಜೀವನ ಶೈಲಿಯನ್ನು ಮತ್ತು ಆಹಾರ ಪದ್ಧತಿ ಬದಲಾಯಿಸಿಕೊಂಡು, ಪರಿಶ್ರಮದ ಜೀವನ ಮತ್ತು ರಾಗಿ, ಸಿರಿಧಾನ್ಯಯುಕ್ತ ಆಹಾರಕ್ಕೆ ಬದಲಾಗಬೇಕು. ಪರಿಶ್ರಮದಿಂದ ಜೀವನ ನಡೆಸುವವರ ಬಳಿ ಯಾವ ರೋಗವೂ ಸುಳಿಯುವುದಿಲ್ಲ. ಆದ್ದರಿಂದ, ರೈತರ ಬದುಕು ಶ್ರಮದಾಯಕವಾದರೂ ಸುಂದರ ಎಂದರು.
ಬಹುಬೆಳೆ ಬೆಳೆಯಿರಿ : ರೈತರು ಒಂದೇ ರೀತಿಯ ಬೆಳೆಯನ್ನು ಒಂದೇ ರೀತಿಯ ವಾಣಿಜ್ಯ ಬೆಳೆ ಬೆಳೆಯುವುದಕ್ಕಿಂತ ಬಹುಬೆಳೆ ಬೆಳೆಯಬೇಕು. ಆಗ ಒಂದು ಬೆಳೆ ಕೈಕೊಟ್ಟರೆ, ಇನ್ನೊಂದು ಬೆಳೆ ಕೈ ಹಿಡಿಯುತ್ತದೆ. ಎಲ್ಲ ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸುವುದು ಮುಖ್ಯ ಎಂದು ಸಲಹೆ ನೀಡಿದರು.
ರೈತರ ಬೆಳೆಗೆ ಸೂಕ್ತ ಬೆಲೆ ದೊರಕದ ಕಾರಣ, ಬೆಂಬಲ ಬೆಲೆ ಬೇಡುತ್ತಾರೆ. ರೈತರ ಬೆಳೆಗೆ ಉತ್ತಮ ಬೆಲೆ ಲಭಿಸುವಂತೆ ಆಗಬೇಕು. ಕೃಷಿ ವಿಶ್ವವಿದ್ಯಾಲಯಗಳು ಕೂಡ ರೈತರು ಮತ್ತು ಕೃಷಿಪರವಾಗಿ ಕೆಲಸ ಮಾಡುತ್ತಿವೆ. ಅಲ್ಲದೇ, ಇಂದಿನ ಕೃಷಿ ಮೇಳದ ಮುಖಾಂತರ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಮಾದರಿ ಮತ್ತು ಆದರ್ಶಗಳನ್ನು ರೈತರು ಮತ್ತು ಜನ ಸಾಮಾನ್ಯರಿಗೆ ಬಿತ್ತರಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು. ಕೃಷಿ ಮೇಳ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಕೃಷಿಕರಾದ ವಿಜಯಪುರದ ಹೆಚ್.ವಿ ಸಜ್ಜನ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ.ಕೆ ನಾಯಕ್, ಶಿಕ್ಷಣ ನಿರ್ದೇಶಕ ಡಾ. ಎಂ ಹನುಮಂತಪ್ಪ, ಕುಲಸಚಿವ ಡಾ.ಲೋಕೇಶ್.ಆರ್, ಡಾ.ಮೃತ್ಯುಂಜಯ ವಾಲಿ, ಡಾ.ದಿನೇಶ್ ಕುಮಾರ್ ಎಂ, ಡಾ. ಶಿವಶಂಕರ್ ಇವರು ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಿದರು.
ಓದಿ: ದೆಹಲಿಗೆ ಜಗದೀಶ್ ಶೆಟ್ಟರ್ ದೌಡು.. ಬಿಜೆಪಿ ಪಾಳಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..