ಶಿವಮೊಗ್ಗ: ಮಾಜಿ ಸಚಿವ ಹೆಚ್. ಆಂಜನೇಯ, ಶಾಸಕ ಪ್ರಭು ಚವ್ಹಾಣ್ ಬಳಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಕರ್ನಾಟಕ ರಾಜ್ಯ ಬಂಜಾರ್ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್ ಗಿರೀಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀದರ್ ಜಿಲ್ಲೆ ಔರಾದ್ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ್ ನಕಲಿ ಜಾತಿ ಪತ್ರ ನೀಡಿ ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿಕೆ ನೀಡಿದ್ರು. ಇದು ಸತ್ಯಕ್ಕೆ ದೂರವಾದದ್ದು, ಹೀಗಾಗಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸಚಿವ ಪ್ರಭು ಚವ್ಹಾಣ್ ಮೂಲತಃ ಕರ್ನಾಟಕ ರಾಜ್ಯದವರೇ ಮತ್ತು ಅವರ ತಾಲೂಕಿನ ಬೋಂತಿ ತಾಂಡಾಕ್ಕೆ ಸೇರಿದವರು. ಹಾಗೂ ಪರಿಶಿಷ್ಟ ಜಾತಿ ಲಂಬಾಣಿ ಸಮುದಾಯಕ್ಕೆ ಸೇರಿದವರು. ಆದರೆ, ಮಾಜಿ ಸಚಿವ ಆಂಜನೇಯ ಅವರು ಈ ಬಗ್ಗೆ ಅರಿವೇ ಇಲ್ಲದೆ ತಪ್ಪು ಹೇಳಿಕೆ ನೀಡಿರುವುದನ್ನು ಸಮಸ್ತ ಬಂಜಾರ ಸಮುದಾಯ ಖಂಡಿಸುತ್ತದೆ. ಚುನಾವಣಾ ಸಂದರ್ಭದಲ್ಲಿ ಕೆಲವರು ವಿನಾಕಾರಣ ಅವರ ಜಾತಿ ಜನ್ಮಸ್ಥಳದ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಸಂಬಂಧ ಆಗ ಚುನಾವಣೆ ಅಧಿಕಾರಿಯಾಗಿದ್ದ ಹರ್ಷಗುಪ್ತ ತನಿಖೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ಅರ್ಜಿಯೊಂದನ್ನು ಸಹ ಹೈಕೋರ್ಟ್ ತಿರಸ್ಕರಿಸಿದೆ ಎಂದು ತಿಳಿಸಿದ್ರು.
ಹಾಗಾಗಿ ಹೆಚ್. ಆಂಜನೇಯ ತಮ್ಮ ಹೇಳಿಕೆ ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು ಎಂದರು. ಸರ್ಕಾರ ಆಂಜನೇಯ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಬೇಕು ಇಲ್ಲದಿದ್ದರೆ ಆಂಜನೇಯ ಅವರ ಮನೆಯ ಮುಂದೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.