ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 23 ಪ್ರಕರಣಗಳು ದಾಖಲಾಗಿದೆ. ಹಾಗಾಗಿ, ಲಾಕ್ ಡೌನ್ ಮಾಡುವ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಡೆಯಲಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 222ಕ್ಕೆ ಏರಿಕೆಯಾಗಿದೆ. ಇದರಲ್ಲಿ 117 ಜನರು ಗುಣಮುಖರಾಗಿ ಮನೆಗೆ ತೆರಳಿದ್ದರೆ, ಉಳಿದ 107 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 4 ಜನ ಸಾವನ್ನಪ್ಪಿದ್ದು, ಇದರಲ್ಲಿ ಇಬ್ಬರು ಶಿವಮೊಗ್ಗ ಜಿಲ್ಲೆಯವರಾದರೆ, ಉಳಿದ ಇಬ್ಬರು ಬೇರೆ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ನಿನ್ನೆಯವರೆಗೆ 40 ಕಂಟೇನ್ಮೆಂಟ್ ಝೋನ್ಗಳಿದ್ದು, ಇಂದು 38ಕ್ಕೆ ಇಳಿಕೆಯಾಗಿದೆ. ಇದುವರೆಗೂ 16,586 ಜನ ಸ್ವಾಬ್ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 15,320 ಜನ ಸ್ವಾಬ್ ಮಾದರಿಯ ಫಲಿತಾಂಶ ಬಂದಿದೆ. ಉಳಿದ 1,040ರ ಫಲಿತಾಂಶ ಬರಬೇಕಿದೆ. ನಿನ್ನೆ ಬಂದ 23 ಪ್ರಕರಣಗಳಲ್ಲಿ 7 ಪ್ರಕರಣಗಳು ಐಎಲ್ಐ (ILI) ಪ್ರಕರಣಗಳಾದರೆ, 5 ಪ್ರಕರಣಗಳು ದ್ವಿತೀಯ ಸಂಪರ್ಕದಿಂದ ಬಂದಿವೆ.
ಕೊರೊನಾ ಗ್ರಾಮಾಂತರ ಭಾಗಕ್ಕೂ ಸಹ ಕಾಲಿಟ್ಟಿದೆ. ಇದರಿಂದ ಜಿಲ್ಲಾಡಳಿತ ಹೆಚ್ಚಿನ ಆಸ್ಪತ್ರೆ ಸೌಲಭ್ಯ ಮಾಡುವ ದೃಷ್ಟಿಯಿಂದ ಮೆಗ್ಗಾನ್ ಆಸ್ಪತ್ರೆಯ ಜೊತೆಗೆ ಶಿವಮೊಗ್ಗ ತಾಲೂಕು ಗಾಜನೂರಿನ ಮೂರಾರ್ಜಿ ಶಾಲೆಯಲ್ಲಿ 100 ಬೆಡ್ ವ್ಯವಸ್ಥೆಯ ಆಸ್ಪತ್ರೆ ಹಾಗೂ ಭದ್ರಾವತಿಯ ವಿಐಎಸ್ಎಲ್ ನಲ್ಲಿ ಸಹ 50 ಬೆಡ್ ವ್ಯವಸ್ಥೆ ಮಾಡುವ ಚಿಂತನೆ ನಡೆಸಿದೆ.