ಶಿವಮೊಗ್ಗ: ಜೋಗ ಜಲಪಾತಕ್ಕೆ ಡಿಸಿ ಕೆ.ಬಿ. ಶಿವಕುಮಾರ್, ಎಸ್ಪಿ ಶಾಂತರಾಜುರವರ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜೋಗ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.
ಈ ವೇಳೆ ಅಧಿಕಾರಿಗಳು ಜೋಗ ಜಲಪಾತ ವೀಕ್ಷಣೆ ಸ್ಥಳ, ಯಾತ್ರಿ ನಿವಾಸ್, ಪ್ರವಾಸಿ ಮಂದಿರ ಸೇರಿದಂತೆ ಹಲವು ಕಡೆ ವೀಕ್ಷಣೆ ನಡೆಸಿದರು. ಈ ವೇಳೆ ವೀಕೆಂಡ್ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ಮಾಡಲು ಸೂಚನೆ ನೀಡಲಾಯಿತು.
ನಾಲ್ಕು ಕಡೆ ವಾಹನ ನಿಲುಗಡೆ:
ಪ್ರವಾಸಿಗರ ವಾಹನ ನಿಲುಗಡೆಗೆ ನಾಲ್ಕು ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಕಾರ್ಗಲ್ ರಸ್ತೆ, ಬ್ರಿಟಿಷ್ ಬಂಗ್ಲೆ, ಯಾತ್ರಿ ನಿವಾಸದ ಬಳಿ ಹಾಗೂ ಜೋಗ ವೀಕ್ಷಣೆಯ ಬಳಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಲಾಯಿತು.
ಪ್ರವಾಸಿಗರಿಗೆ ಜೋಗ ವೀಕ್ಷಣೆಗೆ 4 ಗಂಟೆ ಅವಕಾಶ, ನಂತರ ದಂಡ:
ಜೋಗ ವೀಕ್ಷಣೆಗೂ ಸಹ ಅವಧಿ ನಿಗದಿ ಮಾಡಲಾಗಿದೆ. ನೀವು ಜೋಗದ ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆದು ಒಳ ಬಂದು ನಿಮ್ಮ ಮನಸ್ಸಿಗೆ ಬಂದ ಹಾಗೆ ಇರುವಂತಿಲ್ಲ. ಈಗ ಜೋಗ ವೀಕ್ಷಣೆಗೆ ನಾಲ್ಕು ಗಂಟೆ ಮಾತ್ರ ಅವಕಾಶ ಮಾಡಲಾಗಿದೆ. ನಾಲ್ಕು ಗಂಟೆಯ ನಂತರ ನೀವು ಜೋಗದಲ್ಲಿಯೇ ಇದ್ದರೆ, ನಿಮ್ಮ ಟಿಕೆಟ್ ದರದಷ್ಟೆ ದಂಡ ಹಾಕಲಾಗುತ್ತದೆ.
ಜೋಗದ ಗುಂಡಿ ಇಳಿಯಲು ಅವಕಾಶ:
ಇಷ್ಟು ದಿನ ಜೋಗದ ಗುಂಡಿ ಇಳಿಯಲು ಅವಕಾಶ ಇರಲಿಲ್ಲ. ಮುಂದಿನ ವಾರದಿಂದ ವಾರದ 5 ದಿನ ಅಂದ್ರೆ, ಸೋಮವಾರದಿಂದ ಶುಕ್ರವಾರದ ತನಕ ಮಾತ್ರ ಜೋಗದ ಗುಂಡಿ ಇಳಿಯಲು ಅವಕಾಶ ಕಲ್ಪಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಮಾತ್ರ ಜೋಗದ ಗುಂಡಿ ಕೆಳಗೆ ಇಳಿಯುವ ಗೇಟ್ ಬಂದ್ ಮಾಡಲಾಗಿರುತ್ತದೆ. ಜೋಗದ ಗುಂಡಿಗೆ ಹೋಗಿ ಮೋಜು ಮಸ್ತಿ ಮಾಡಲು ಹೋಗಿ ಅನಾಹುತ ಮಾಡಿಕೊಂಡವರೆ ಹೆಚ್ಚು ಇದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜೋಗದಲ್ಲಿ ಜಾಗೃತಿಗಾಗಿ ಅನೌನ್ಸ್ ಮೆಂಟ್ ಇರಲಿದೆ:
ಜೋಗದಲ್ಲಿ ಇನ್ನೊಂದು ಪ್ರಾಧಿಕಾರದ ವತಿಯಿಂದ ಪ್ರವಾಸಿಗರ ಜಾಗೃತಿಗಾಗಿ ಅನೌನ್ಸ್ಮೆಂಟ್ ಇರಲಿದೆ. ಕೊರೊನಾ ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸಲು, ಪಾರ್ಕಿಂಗ್ ಸರಿಯಾಗಿ ಮಾಡದೆ ಇರುವುದರ ಬಗ್ಗೆ ಜಾಗೃತಿ ಮೂಡಿಸಲು ಅನೌನ್ಸ್ ಮೆಂಟ್ ಇರಲಿದೆ.
ಈ ಕುರಿತು ಜಿಲ್ಲಾಧಿಕಾರಿಗಳು ಜೋಗ ನಿರ್ವಹಣಾ ಪ್ರಾಧಿಕಾರದವರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಯವರಿಗೆ ಸೂಚನೆ ನೀಡಿದರು. ಈ ವೇಳೆ ಸಾಗರ ಉಪವಿಭಾಗಾಧಿಕಾರಿ ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು.