ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಇಲಾಖೆಯು ಸೂಪರ್ ಫುಡ್ ಎಂದು ಕರೆಯಲ್ಪಡುವ ರಾಂಬುಟಾನ್ ಹಣ್ಣನ್ನು ಜಿಲ್ಲೆಗೆ ಪರಿಚಯಿಸುತ್ತದೆ.
ತನ್ನ ಆರೋಗ್ಯ ವರ್ಧಕ ಗುಣಗಳಿಂದ ಕೂಡಿರುವ ರಾಂಬುಟಾನ್ ಹಣ್ಣಿಗೆ ಎಲ್ಲಡೆ ಬೇಡಿಕೆ ಹೆಚ್ಚುತ್ತಿದ್ದು, ಅದೇ ರೀತಿ ಕರ್ನಾಟಕದಲ್ಲಿಯೂ ಕೂಡ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಕಂಡು ಬಂದಿದೆ. ಈ ಹಣ್ಣು ತನ್ನಲ್ಲಿ ಅಪಾರವಾದ ವಿಟಮಿನ್ (ಎ ಮತ್ತು ಸಿ), ಜಿಂಕ್(ಸತು) ಹಾಗೂ ಸಕ್ಕರೆಯ ಅಂಶಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಅಪಾರ.
ರಾಂಬುಟಾನ್ ಹಣ್ಣು ಮೂಲತಃ ಮಲೇಶಿಯಾ ಹಾಗೂ ಸೌತ್ ಇಸ್ಟ್ ಏಷಿಯಾದ ಹಣ್ಣಾಗಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಕೂಡ ಇದನ್ನು ಬೆಳೆಯಲಾಗುತ್ತಿದೆ. ರಾಂಬುಟಾನ್ ವ್ಯವಸಾಯಕ್ಕೆ ಹೆಚ್ಚಿನ ಫಲವತ್ತತೆಯಿಂದ ಕೂಡಿದ ಹಾಗು ನೀರು ಬಸಿದು ಹೋಗುವ ಜೇಡಿ ಮಿಶ್ರಿತ ಗೋಡು ಮಣ್ಣಿನ ಭೂಮಿ, 15-30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ದ್ರವತೆಯಿಂದ ಕೂಡಿದ ಹವೆ (75-90%) ವಾತಾವರಣ ಸೂಕ್ತವಾಗಿರುತ್ತದೆ.
ಈ ಹಣ್ಣಿನಲ್ಲಿ ಕೆಂಪು ಹಾಗೂ ಹಳದಿ ಬಣ್ಣದ ಎರಡು ವಿಧಗಳಿದ್ದು, ಐ.ಐ.ಹೆಚ್.ಆರ್ ಅಂಗಸಂಸ್ಥೆಯಾದ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಚಟ್ಟಳ್ಳಿಯಿಂದ CHS.-14, CHS.R-26 ಹಾಗೂ CHS.R-31 ಎಂಬ ಮೂರು ತಳಿಗಳನ್ನು ಬಿಡುಗಡೆ ಮಾಡಿದೆ.
ಅಧಿಕ ಸಾದ್ರಂತೆ ಪದ್ದತಿಯಲ್ಲಿ 4 ಮೀ.x 4 ಮೀ. ಅಂತರದಲ್ಲಿ ಒಂದು ಎಕರೆಗೆ 100-120 ಗಿಡಗಳನ್ನು ಬೆಳೆಯಬಹುದಾಗಿರುತ್ತದೆ. ರೈತರು ಬೆಳೆಗೆ ಸಗಣಿಗೊಬ್ಬರ, ಎರೆಹುಳುಗೊಬ್ಬರ, ಸಾರಜನಕ, ರಂಜಕ, ಪೋಟ್ಯಾಶ್ ಅನ್ನು 3 ಹಂತಗಳಲ್ಲಿ ನೀಡಬೇಕಾಗುತ್ತದೆ (ಮಳೆ ಪಾರಂಭವಾಗುವ ಮೊದಲು, ಹೂ ಬಿಡುವ ಸಮಯ ಹಾಗೂ ಮಳೆಗಾಲ ಮುಗಿದ ನಂತರ ಕೊಡಬೇಕು). ಪ್ರತಿ ವರ್ಷಕ್ಕೆ ಒಂದು ಬಾರಿ 300-500 ಗ್ರಾಂ. ಡೊಲಾಮೈಟ್‍ನ್ನು ನೀಡಬೇಕು. ಇದರಿಂದ ಮಣ್ಣಿನ ರಸಸಾರ ಉತ್ತಮಗೊಳ್ಳುತ್ತದೆ.
ರಾಂಬುಟಾನ್ ಹಣ್ಣುಗಳು ಕರ್ನಾಟಕದಲ್ಲಿ ಸೆಪ್ಟೆಂಬರ್- ಡಿಸೆಂಬರ್ನಲ್ಲಿ ಮಾರುಕಟ್ಟೆಗೆ ಬರುತ್ತವೆ. ಇನ್ನು ಕೇರಳದಲ್ಲಿ ಹಣ್ಣುಗಳು ಜೂನ್-ಜುಲೈನಲ್ಲಿ ಮಾರುಕಟ್ಟೆಗೆ ಬರುತ್ತವೆ. ಆದ್ದರಿಂದ ಮಾರುಕಟ್ಟೆಯಲ್ಲಿ ಯಾವುದೇ ರೀತಿ ಪೈಪೋಟಿ ಉಂಟಾಗದಿರುವುದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುತ್ತೆದೆ.
ಇನ್ನು ರಾಂಬುಟಾನ್ ಗಿಡಗಳು 3 ವರ್ಷದ ನಂತರ ಇಳುವರಿ ಕೊಡಲು ಪ್ರಾರಂಭಿಸುತ್ತವೆ. ಆದರೂ ರೈತರು 6 ವರ್ಷದ ನಂತರ ಉತ್ತಮ ಇಳುವರಿಯನ್ನು ನೀರಿಕ್ಷಿಸಬಹುದಾಗಿತ್ತದೆ. 6 ವರ್ಷದ ನಂತರ ಪ್ರತಿ ಮರದಿಂದ ಸರಿಸುಮಾರು 40-50 ಕೆ.ಜಿ ಹಣ್ಣುಗಳನ್ನು ಪಡೆಯಬಹುದಾಗಿರುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಹಣ್ಣಿಗೆ ಅದಾಂಜು 200-300 ರೂ.ಗಳನ್ನು ಪಡೆಯಬಹುದಾಗಿರುತ್ತದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.