ಶಿವಮೊಗ್ಗ : ಮನರೇಗಾ ಉದ್ಯೋಗಿಯೋರ್ವ ಡೆತ್ ನೋಟು ಬರೆದಿಟ್ಟು ಗ್ರಾಮ ಪಂಚಾಯತ್ ಕಚೇರಿಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಹಾರೋಗೊಳಿಗೆ ಗ್ರಾಮದಲ್ಲಿ ನಡೆದಿದೆ.
ಹಾರೋಗೊಳಿಗೆ ಗ್ರಾಮ ಪಂಚಾಯತ್‌ನಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಸಚಿನ್ ಗೆರಸ ಆತ್ಮಹತ್ಯೆ ಮಾಡಿಕೊಂಡಾತ. ಇಂದು ರಜೆ ಇದ್ದರೂ ಸಹ ಸಚಿನ್ ಕೆಲಸವಿದೆ ಎಂದು ಗ್ರಾಮ ಪಂಚಾಯತ್ಗೆ ಬಂದು ನೇಣಿಗೆ ಶರಣಾದ್ದಾನೆ. ಬಹಳ ಹೊತ್ತು ಸಚಿನ್ ಕಚೇರಿಯಿಂದ ಹೊರಬಾರದೆ ಇರುವುದನ್ನು ಕಂಡು ಅನುಮಾನಗೊಂಡು ಸ್ಥಳೀಯರು ಕಿಟಕಿಯಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೀರ್ಥಹಳ್ಳಿಯ ಸಿಪಿಐ ಸಂತೋಷ್ ಭೇಟಿ ನೀಡಿ ಪರಿಶೀಲಿಸಿದಾಗ ಡೆತ್ ನೋಟು ಪತ್ತೆಯಾಗಿದೆ. ಡೆತ್ ನೋಟ್ನಲ್ಲಿ ಅಜ್ಜಿ ಹಾಗೂ ಮಗಳ ಚಿತ್ರಹಿಂಸೆಯಿಂದ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಬರೆದಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.