ಶಿವಮೊಗ್ಗ: ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಕರೆಯುತ್ತಾರೆ. ಆದರೆ, ಇಂತಹ ದೇವರನ್ನೇ ಹೆತ್ತ ಮಗನೊಬ್ಬ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಭದ್ರಾವತಿ ಪಟ್ಟಣದ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಾವಿನಕೆರೆ ಕಾಲೋನಿ ನಿವಾಸಿ ಸುಲೋಚನಮ್ಮ ಮೃತರು. ಆಕೆಯ ಮಗ ಸಂತೋಷ್ ಕೊಲೆ ಆರೋಪಿ. ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿ ಸಂತೋಷ್ ತನ್ನ ತಾಯಿಯನ್ನು ಬಡಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ತೋಟದಲ್ಲಿ ಮಲಗಿ ಕೊಂಡಿದ್ದಾನೆ ಎಂಬುವುದು ಸ್ಥಳೀಯರ ಆರೋಪ.
ಸುಲೋಚನಮ್ಮ ಅವರಿಗೆ ಇಬ್ಬರು ಮಕ್ಕಳು. ಇನ್ನೊಬ್ಬ ಮಗ ತಾಯಿಯಿಂದ ಬೇರೆ ವಾಸ ಮಾಡುತ್ತಿದ್ದಾರೆ. ಸಂತೋಷ್ ಪ್ರತಿ ದಿನ ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಹಣ ನೀಡದೇ ಕುಡಿದುಕೊಂಡು ಬರುತ್ತಿದ್ದನಂತೆ. ಮದುವೆಯಾಗಿ ಮಕ್ಕಳಿದ್ದರೂ ದುಡಿದು ಸಂಸಾರ ನಡೆಸದೇ ದುಡಿದ ಎಲ್ಲ ಹಣವನ್ನು ವ್ಯರ್ಥ ಮಾಡುತ್ತಿದ್ದನಂತೆ. ಇದರಿಂದ ಸಂತೋಷ್ ಹೆಂಡತಿ ತನ್ನ ಮಕ್ಕಳ ಜತೆ ಎಂ.ಸಿ ಹಳ್ಳಿಗೆ ಹೋಗಿ ನೆಲೆಸಿದ್ದಾರೆ. ಅಲ್ಲಿಗೂ ಹೋಗಿ ಆರೋಪಿ ಕಿರಿಕಿರಿಯನ್ನುಂಟು ಮಾಡುತ್ತಿದ್ದನಂತೆ. ಹಗಲು ರಾತ್ರಿ ಎನ್ನದೇ ಕುಡಿದು ಅಲೆಯುತ್ತಿದ್ದ ಆತ ಭಾನುವಾರ ರಾತ್ರಿ ಕುಡಿಯಲು ಹಣ ನೀಡುವಂತೆ ತಾಯಿಯನ್ನು ಕೇಳಿದ್ದಾನೆ. ಈ ವಿಚಾರಕ್ಕೆ ತಾಯಿ ಮಗನ ನಡುವೆ ಜಗಳ ನಡೆದಿದೆ. ಕುಡಿಯಲು ಹಣ ಸಿಗದ ಕಾರಣ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Honor Killing: ಪ್ರಿಯಕರನೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಯುವತಿ.. ಕುಟುಂಬಸ್ಥರಿಂದ ಮರ್ಯಾದಾ ಹತ್ಯೆ
ಊಟ ಕೂಡಲು ಬಂದವರಿಂದ ಪ್ರಕರಣ ಬೆಳಕಿಗೆ: ನಿತ್ಯ ಸುಲೋಚನಮ್ಮ ಬೆಳಗ್ಗೆಯೇ ಎದ್ದು ಅಕ್ಕ ಪಕ್ಕದವರ ಬಳಿ ಮಾತನಾಡುತ್ತಿದ್ದರು. ವಯಸ್ಸಾದ ಕಾರಣ ಅಡುಗೆ ಮಾಡಲು ಕೆಲವೊಮ್ಮೆ ಆಗುತ್ತಿರಲಿಲ್ಲ. ಇದರಿಂದ ನೆರೆಹೊರೆಯವರು ಊಟ - ತಿಂಡಿ ನೀಡುತ್ತಿದ್ದರು. ನಿನ್ನೆ (ಸೋಮವಾರ) ಬೆಳಗ್ಗೆಯಾದರು ಎದ್ದು ಹೊರಬಾರದ ಸುಲೋಚನಮ್ಮ ಅವರನ್ನು ನೋಡಲು ನೆರೆಯವರು ಬಂದು ಮನೆಯ ಕಿಟಿಕಿಯನ್ನು ತೆರೆದು ನೋಡಿದ್ದಾರೆ. ಈ ವೇಳೆ ಸುಲೋಚನಮ್ಮ ಮಲಗಿದಂತೆ ಕಂಡಿದೆ. ಇದರಿಂದ ಅವರು ವಾಪಸ್ ಆಗಿದ್ದಾರೆ.
ಬಳಿಕ ಮಧ್ಯಾಹ್ನ ಆದರೂ ಸಹ ಅವರು ಹೊರಬಾರದೇ ಹೋದಾಗ ಗುಂಡಮ್ಮ ಎಂಬುವರು ಮತ್ತೆ ಹೋಗಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ, ಆರೋಪಿ ಮಗ ಕುಡಿದು ರಸ್ತೆ ಬದಿ ಬಿದ್ದಿದ್ದನು. ಸುಲೋಚನಮ್ಮ ಅವರನ್ನು ಆಕೆಯ ಮಗನೇ ಕುಡಿಯುವ ಹಣಕ್ಕಾಗಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆರೋಪಿ ಸಂತೋಷ್ ಕುಡಿತದ ನಶೆಯಲ್ಲಿ ಇರುವುದರಿಂದ ಆತನನ್ನು ಪೊಲೀಸರು ವಿಚಾರಣೆ ಒಳಪಡಿಸಿದ್ದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಈ ಸಂಬಂಧ ಹೊಸಮನೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಭೀಕರ ಕೊಲೆ