ಶಿವಮೊಗ್ಗ: ಸಾಗರದ ಚಾಲಕ ಹರ್ಷ ಕುಮಾರ್ ಹಾಗೂ ಪತ್ನಿ ಅನಿತಾ ಅನುಮಾನಾಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಸಾಗರದ ವಾಹನ ಚಾಲಕರು ಮತ್ತು ಮಾಲೀಕರ ಸಂಘ, ಕರ್ನಾಟಕ ಕ್ರಾಂತಿರಂಗ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಸಾಗರ ಘಟಕ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ನಂತರ ಸಾಗರದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ದಂಪತಿ ಸಾವಿಗೆ ಕಾರಣ ಯಾರು ಅಂತ ಪೊಲೀಸರಿಗೆ ಗೊತ್ತಿದ್ದರೂ ಅವರನ್ನು ಬಂಧಿಸದೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ವಕೀಲ ಸುದರ್ಶನ್ ಮಾತನಾಡಿ, ಮೃತ ಹರ್ಷ ಕುಮಾರ್ ಸಹೋದರಿ ತನ್ನ ಅಣ್ಣನ ಸಾವಿಗೆ ಇಂತಹವರೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದ್ರೂ ಪೊಲೀಸರು ಕಣ್ಣು-ಕಿವಿ ಮುಚ್ಚಿಕೊಂಡು ಕುಳಿತಿರುವುದು ಖಂಡನೀಯ. ಆರೋಪಿ ಸಾಗರ ಪಟ್ಟಣದಲ್ಲೇ ಇದ್ದರೂ ಆತನನ್ನು ಬಂಧಿಸದೆ ಪೊಲೀಸರು ಕರ್ತವ್ಯಲೋಪ ಎಸಗುತ್ತಿದ್ದಾರೆ. ಹರ್ಷ ಕುಮಾರ್ಗೆ ಆಗಿರುವ ಗತಿ ನಾಳೆ ಬೇರೆಯವರಿಗೂ ಆಗಬಹುದು. ಇದರಿಂದ ಪೊಲೀಸರು ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.