ಶಿವಮೊಗ್ಗ: ರಾಜ್ಯಕ್ಕೆ ಬೆಳಕು ಕೊಟ್ಟ ಶರಾವತಿ ಮುಳುಗಡೆ ಸಂತ್ರಸ್ತರು ಇಂದು ಕತ್ತಲಲ್ಲಿದ್ದಾರೆ. ತಾಕತ್, ಧಮ್ ಇದ್ದರೆ ಎಂದು ಪದೇ ಪದೆ ಹೇಳುವ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ಹಕ್ಕು ಪತ್ರ ನೀಡಲಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸಲು, ಅವರಿಗೆ ಹಕ್ಕು ಪತ್ರ ಕೊಡಿಸುವ ನಿಟ್ಟಿನ ಕಾಂಗ್ರೆಸ್ ಪಕ್ಷ ಇದೆ. ಈ ನಿಟ್ಟಿನಲ್ಲಿ ನವೆಂಬರ್ 28ರಂದು ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಉಸ್ತುವಾರಿ ರಣ್ದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಅಂದು ಆಯನೂರಿನಿಂದ ಪಾದಯಾತ್ರೆ ಪ್ರಾರಂಭವಾಗಿ ಶಿವಮೊಗ್ಗ ನಗರಕ್ಕೆ ಆಗಮಿಸಲಿದೆ. ಶಿವಮೊಗ್ಗ ನಗರದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು.
ಇದನ್ನೂ ಓದಿ: ಸರ್ಕಾರಕ್ಕೆ ತಾಕತ್ ಇದ್ರೆ ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡಲಿ- ಮಧು ಬಂಗಾರಪ್ಪ
ಬಣ್ಣ ಜಾತಿಯ ಹಿಂದೆ ಬಿಜೆಪಿ: ರಾಜ್ಯದ, ದೇಶದ ಜನರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಬಣ್ಣ, ಜಾತಿ,ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ. ಜಾತಿ, ಧರ್ಮದ ಆಧಾರದ ಮೇಲೆ ಬಿಜೆಪಿಯವರು ಬದುಕಿದ್ದಾರೆ. ಇಂದಿನ ಸಮಸ್ಯೆಗಳೇ ಬೇರೆ, ಬಿಜೆಪಿಯವರು ಮಾತನಾಡುತ್ತಿರುವ ವಿಚಾರಗಳೇ ಬೇರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇದೇ ವೇಳೆ ಆರೋಪಿಸಿದರು.
ರೈತರನ್ನು ಸಾಯಿಸಬೇಡಿ, ನೀವು ಸಾಯಿರಿ: ಬಿಜೆಪಿ ಸರ್ಕಾರವು ಬಡವರು, ಜನರ ಪರವಾಗಿ ಧ್ವನಿಯಾಗಿರುವ ಸರ್ಕಾರವಲ್ಲ. ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಸರ್ಕಾರದ ಮುಗಿದು ಹೋಗಿದೆ. ಈಗ ಶಿವಮೊಗ್ಗ ಜಿಲ್ಲೆಯ ಮೂರು ಜನ ಶಾಸಕರಾದ ಅಶೋಕ್ ನಾಯ್ಕ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ರೈತರು ಸಾಯಲು ಬಿಡುವುದಿಲ್ಲ ಎನ್ನುತ್ತಾರೆ. ರೈತರನ್ನು ಸಾಯಿಸಬೇಡಿ, ನೀವು ಸಾಯಿರಿ ಎಂದರು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಖಾರವಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಆರ್.ಪ್ರಸನ್ನ ಕುಮಾರ್, ಕೆ.ಬಿ.ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್‌ಎಸ್ ಸುಂದರೇಶ್, ಮುಖಂಡರಾದ ಕಲ್ಗೊಡು ರತ್ನಾಕರ್, ದಿನೇಶ್, ರಮೇಶ್ ಹೆಗ್ಡೆ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಡಿನೋಟಿಫಿಕೇಷನ್ ರದ್ದುಗೊಳಿಸಿದ ಸರ್ಕಾರ.. ಕಮರಿದ ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು