ಶಿವಮೊಗ್ಗ: ತಹಶೀಲ್ದಾರ್ ನಾಗರಾಜ್ ಮತ್ತು ರೆವಿನ್ಯೂ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಸಾರ್ವಜನಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಸಾರ್ವಜನಿಕವಾಗಿ ಸಚಿವರೋರ್ವರ ಕಾಲಿಗೆ ಬೀಳುವ ಅಧಿಕಾರಿಗಳ ವರ್ತನೆ ನಿಜಕ್ಕೂ ಖಂಡನೀಯ. ತಾಲೂಕು ದಂಡಾಧಿಕಾರಿಯಾಗಿ ಒಂದು ಪಕ್ಷದ ಕಾರ್ಯಕರ್ತರ ರೀತಿ ವರ್ತನೆ ಮಾಡಿದ್ದಾರೆ. ಅಧಿಕಾರಿಗಳು ಹೀಗಿದ್ದರೆ ಜನಪರವಾಗಿ ಕೆಲಸ ಮಾಡಲು ಹೇಗೆ ಸಾಧ್ಯ? ಓರ್ವ ತಹಶೀಲ್ದಾರ್ ಅಗಿ ಸರ್ಕಾರಿ ಅಧಿಕಾರಿಗಳ ಸಮೂಹಕ್ಕೆ ಅವಮಾನ ಮಾಡುವಂತೆ ನಡೆದುಕೊಂಡಿದ್ದಾರೆ. ಹಾಗಾಗಿ ಈ ಕೂಡಲೇ ಆ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ತಹಶೀಲ್ದಾರ್ ನಾಗರಾಜ್ ಕಳೆದ ಶುಕ್ರವಾರ ಶಿವಮೊಗ್ಗ ತಹಶೀಲ್ದಾರ್ ಅಗಿ ಅಧಿಕಾರ ಸ್ವೀಕರಿಸಿದ್ದು, ಅದರ ಮರು ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಅವರ ಜೊತೆ ರೆವಿನ್ಯೂ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಕೂಡಾ ಸಚಿವರ ಕಾಲಿಗೆ ಬಿದ್ದಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.