ಶಿವಮೊಗ್ಗ: ಹುಣಸೋಡು ಗ್ರಾಮದ ಬಳಿ ನಡೆದ ಕಲ್ಲುಕ್ವಾರಿ ಸ್ಪೋಟಕ್ಕೆ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಅವರೇ ನೇರ ಕಾರಣ ಎಂದು ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ ಆರೋಪಿಸಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೊನ್ನೆ ನಡೆದ ಕಲ್ಲು ಕ್ವಾರಿ ಸ್ಪೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಅಕ್ರಮ ಕಲ್ಲುಗಣಿಗಾರಿ ಹಿಂದೆ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಅವರ ಕೈವಾಡವಿದೆ ಹಾಗೂ ಪರಿಸರ ಇಲಾಖೆ,ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಶ್ರೀರಕ್ಷೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜಕಾರಣಿಗಳ ಆಶ್ರಯವಿಲ್ಲದೆ ಈ ದಂಧೆ ವಿಸ್ತರವಾಗಲು ಸಾಧ್ಯವಿಲ್ಲ, ಇದಕ್ಕೆ ಸಾಕ್ಷಿಯೆಂಬಂತೆ ಕಲ್ಲು ಕ್ವಾರಿಗಳ ಮಾಲೀಕರು ಶಾಸಕ ಅಶೋಕ್ ನಾಯಕ್ ಅವರನ್ನು ಸನ್ಮಾನ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕಾದ ಶಾಸಕರೇ ಕ್ವಾರಿ ದಂಧೆಕೋರರಿಂದ ಸನ್ಮಾನ ಮಾಡಿಸಿಕೊಂಡಿರುವುದು ನೋಡಿದರೆ ಇದರ ಹಿಂದೆ ಶಾಸಕರ ಕೈವಾಡ ಇದೆ ಎಂದು ಸ್ಪಷ್ಟವಾಗುತ್ತದೆ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಕ್ವಾರಿಗಳಿವೆ. ಆದರೆ, ಅದರಲ್ಲಿ ಕೇವಲ 75 ಕ್ವಾರಿಗಳಿಗೆ ಮಾತ್ರ ಪರವಾನಿಗೆ ಇದೆ. ಅವು ಕೂಡ ನವೀಕರಣವಾಗಿಲ್ಲ, ಕೆಲವರು ತಮಗೆ ನೀಡಿರುವ ಜಾಗಕ್ಕಿಂತ ಹೆಚ್ಚು ಜಾಗವನ್ನು ವಿಸ್ತರಿಸಿಕೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಅಕ್ರಮ ಕಲ್ಲು ಗಣಿಗಾರಿಕೆ ಬಳಸುವ ಸ್ಪೋಟಕದ ವಸ್ತುಗಳು ಎಲ್ಲಿಂದ ಸಿಗುತ್ತವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹಾಗಾಗಿ, ಸರ್ಕಾರ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಜೊತೆಗೆ ಕಲ್ಲುಕ್ವಾರಿ ಸ್ಪೋಟದಿಂದ ಸ್ಥಳೀಯ ನಿವಾಸಿಗಳಿಗಾದ ನಷ್ಟ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ವಿಷಯ ತಿಳಿಸಲು ಸಹ ಪೋಲಿಸರು ಬಿಡದೇ ಅರೆಸ್ಟ್ ಮಾಡಿದ್ದಾರೆ. ಜನ ಪ್ರತಿನಿಧಿಗಳಿಗೆ ಹೀಗಾದರೆ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.
ಅಕ್ರಮ ಕಲ್ಲುಗಣಿಗಾರಿಕೆ, ಸ್ಪೋಟದ ಪ್ರಕರಣದ ಹಿಂದೆ ರಾಜಕೀಯ ವ್ಯಕ್ತಿಗಳು ಸೇರಿದಂತೆ ಅನೇಕ ಪ್ರಭಾವಿಗಳು ಇದ್ದಾರೆ. ಹಾಗಾಗಿ, ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.