ಶಿವಮೊಗ್ಗ : ಇಲ್ಲಿನ ಜಿಲ್ಲಾಧಿಕಾರಿ ಓರ್ವ ಅಯೋಗ್ಯ, ಸಿಎಂ ಹಾಗೂ ಸಂಸದರು ಹೇಳಿದ ಚೇಲಾ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಲಹಾ ಸಮಿತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಈಡಿಗ ಸಮುದಾಯದ ಭವನದಲ್ಲಿ ನಡೆದ ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಯೋಗತ್ಯೆ ಇಲ್ಲದೇ ಹೋದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ. ಈಡಿಗ ಸಮುದಾಯದ ಸ್ವಯಂ ಘೋಷಿತ ಸಂಘ ಎಂದು ಹೇಳುವ ಮೂಲಕ 55 ಲಕ್ಷ ಜನರಿರುವ ಈಡಿಗ ಸಮುದಾಯದ ಬಗ್ಗೆ ಅವಹೇಳನಕಾರಿಯುತ ಹೇಳಿಕೆ ನೀಡಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ಈ ಕೂಡಲೇ ಈಡಿಗ ಸಮುದಾಯದ ಕ್ಷೇಮೆ ಕೇಳಬೇಕು ಎಂದು ಬೇಳೂರು ಆಗ್ರಹಿಸಿದರು.
ಇಷ್ಟು ವರ್ಷಗಳ ಕಾಲ ನಡೆದುಕೊಂಡು ಬಂದ ದೇವಸ್ಥಾನದ ಟ್ರಸ್ಟ್ನಲ್ಲಿ ಗೊಂದಲ ಇದ್ದರೆ ಲೆಕ್ಕಪತ್ರ ಕೇಳಬೇಕಿತ್ತು. ಆದರೆ, ಕೋರ್ಟ್ ರಜೆ ಇರುವ ಸಂದರ್ಭದಲ್ಲಿಯೇ ಸಂಸದ ರಾಘವೇಂದ್ರ ಹಾಗೂ ಸಾಗರ ಶಾಸಕ ಹಾಲಪ್ಪ ಮಾಡಿರುವ ರಾಜಕೀಯ ಪೀತೂರಿ ಇದು ಎಂದರು.
ಗೋಕರ್ಣದಲ್ಲಿಯೂ ಗಲಾಟೆಗಳು ನಡೆದಿವೆ. ಧರ್ಮಸ್ಥಳ, ಉಡುಪಿಯಲ್ಲಿಯೂ ಗಲಾಟೆಗಳು ನಡೆದಿವೆ. ಹಾಗಂತ ಎಲ್ಲಾ ದೇವಸ್ಥಾನಗಳಿಗೂ ಆಡಳಿತ ಮಂಡಳಿ ನೇಮಕ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಹಾಗಾಗಿ ಕೂಡಲೇ ಸಲಹಾ ಸಮಿತಿ ರದ್ದು ಮಾಡಿ ಈ ಹಿಂದೆ ಇದ್ದ ಹಾಗೇ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು, ಇಲ್ಲವಾದರೆ ರಾಜ್ಯದಲ್ಲಿನ ಎಲ್ಲಾ ಧರ್ಮದ 25 ಸಾವಿರ ಜನರನ್ನು ಸೇರಿಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.