ಶಿವಮೊಗ್ಗ: ಜಿಲ್ಲೆಯಲ್ಲಿ ಒತ್ತುವರಿ ಮಾಡಲಾಗಿರುವ ಕೆರೆಗಳ ತೆರವು ಕಾರ್ಯವನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ದಾಖಲೆಗಳ ಪ್ರಕಾರ ಒಟ್ಟು 4675 ಕೆರೆಗಳಿದ್ದು, ಇವುಗಳ ಪೈಕಿ ಶಿವಮೊಗ್ಗದಲ್ಲಿ 133, ತೀರ್ಥಹಳ್ಳಿಯಲ್ಲಿ 70, ಭದ್ರಾವತಿಯಲ್ಲಿ 22, ಸೊರಬ ಮತ್ತು ಶಿಕಾರಿಪುರಗಳಲ್ಲಿ ತಲಾ 11, ಹೊಸನಗರದಲ್ಲಿ 7 ಹಾಗೂ ಸಾಗರದಲ್ಲಿ ಒಂದು ಕೆರೆ ಒತ್ತುವರಿ ತೆರವುಗೊಳಿಸಲು ಬಾಕಿಯಿದೆ.
ಇದುವರೆಗೆ 263 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇವುಗಳಲ್ಲಿ ಶಿವಮೊಗ್ಗ 41, ಭದ್ರಾವತಿ 32, ತೀರ್ಥಹಳ್ಳಿ 76, ಸಾಗರ 48 ಮತ್ತು ಶಿಕಾರಿಪುರದಲ್ಲಿ 59 ಕೆರೆಗಳು ಸೇರಿವೆ. ಬಾಕಿ ಉಳಿದಿರುವ ಎಲ್ಲಾ ಕೆರೆಗಳ ಒತ್ತುವರಿಯನ್ನು ನಿಗದಿತ ಸಮಯದ ಒಳಗಾಗಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಇನ್ನು ಜಿಲ್ಲೆಯಲ್ಲಿ ಸಾರ್ವಜನಿಕ ಉದ್ಯಾನಗಳು ಹಾಗೂ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಹೈಕೋರ್ಟ್ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿರುವ ಅಂತಹ ಕಟ್ಟಡಗಳ ಇತ್ತೀಚಿನ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 248 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಇದರಲ್ಲಿ 6 ಸಾರ್ವಜನಿಕ ಸ್ಥಳಗಳಲ್ಲಿ, 19 ಉದ್ಯಾನಗಳಲ್ಲಿ ಹಾಗೂ 219 ರಸ್ತೆಗಳಲ್ಲಿವೆ. ಇದರಲ್ಲಿ ಶಿವಮೊಗ್ಗ ತಾಲೂಕು 59, ಭದ್ರಾವತಿ 11, ತೀರ್ಥಹಳ್ಳಿ 14, ಸಾಗರ 30, ಶಿಕಾರಿಪುರ 60, ಸೊರಬ 44 ಹಾಗೂ ಹೊಸನಗರದಲ್ಲಿ 26 ಇವೆ. ಇವುಗಳ ಪೈಕಿ 20 ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, 224 ತೆರವುಗೊಳಿಸಲು ಬಾಕಿಯಿವೆ.
91 ಪ್ರಕರಣಗಳನ್ನು ಸಕ್ರಮಗೊಳಿಸಲಾಗಿದ್ದು, ಒಂದು ಪ್ರಕರಣ ನ್ಯಾಯಾಲಯದಲ್ಲಿದೆ. ಪ್ರಸ್ತುತ 129 ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ. ಸರ್ಕಾರದ ಆದೇಶದ ಪ್ರಕಾರ ಪ್ರತಿಯೊಂದು ಪ್ರಕರಣಗಳನ್ನು ಪರಿಶೀಲಿಸಿ ಎರಡು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.