ಶಿವಮೊಗ್ಗ : ಮುಂದಿನ ಆರು ತಿಂಗಳಲ್ಲಿ ಸಿಎಂ ಬದಲಾವಣೆ ಆಗಲಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗದಲ್ಲಿ ಭವಿಷ್ಯ ನುಡಿದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಕೊರೊನಾದಿಂದಾಗಿ ಜನ ಬೀದಿಗಿಳಿದು ಹೋರಾಟ ಮಾಡುತ್ತಿಲ್ಲ. ಬಿಜೆಪಿ ಪಕ್ಷದ ಶಾಸಕರುಗಳಿಗೆ ಅನುದಾನ ನೀಡುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಅವರೆಲ್ಲಾ ಎಂಎಲ್ಸಿ ಹಾಗೂ ರಾಜ್ಯಸಭಾ ಚುನಾವಣೆ ನಡೆಯಲಿ ಎಂದು ಕಾಯುತ್ತಿದ್ದಾರೆ. ಹೆಚ್. ವಿಶ್ವನಾಥ್ ಅವರಿಗೆ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು. ಇವರಿಗೆ ಜೆಡಿಎಸ್ನಲ್ಲಿ ಟಿಕೇಟ್ ನೀಡಿ, ಶಾಸಕರನ್ನಾಗಿಸಿ ನಂತರ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಈಗ ಬಿಜೆಪಿಗೆ ಬಂದು ಸೋಲುವಂತಾಯಿತು. ಈಗ ಎಂಎಲ್ಸಿ ಟಿಕೇಟ್ ಸಹ ಇಲ್ಲದ ಪರಿಸ್ಥಿತಿ ಬಂದಿದೆ. ಅವರಿಗೆ ತಕ್ಕ ಪಾಠವಾಗಿದೆ ಎಂದು ಗುಡುಗಿದರು.
ಯಡಿಯೂರಪ್ಪ ಆರು ತಿಂಗಳ ನಂತರ ಸಿಎಂ ಖುರ್ಚಿಯಲ್ಲಿ ಇರಲ್ಲ. ಅದು ಸಿಎಂ ಯಡಿಯೂರಪ್ಪನವರಿಗೆ ಮುಳ್ಳಿನ ಖುರ್ಚಿಯಾಗಿದೆ. ಭವಿಷ್ಯ ಹೇಳಲು ನಾನೇನು ಕೋಡಿಮಠದ ಸ್ವಾಮೀಜಿ ಅಲ್ಲ. ಸಾಕಷ್ಟು ಬಿಜೆಪಿ ಶಾಸಕರು ತಮ್ಮ ತಮ್ಮ ಅಸಮಾಧಾನವನ್ನು ತಮ್ಮ ತಮ್ಮಲ್ಲಿಯೇ ಮುಚ್ಚಿಟ್ಟುಕೊಂಡಿದ್ದಾರೆ. ಬಿಜೆಪಿಯಲ್ಲಿ ಸಿಎಂ ರೇಸ್ನಲ್ಲಿ ಎರಡ್ಮೂರು ಜನ ಇದ್ದಾರೆ. ನಮ್ಮ ಪಕ್ಷವಂತೂ ಯಡಿಯೂರಪ್ಪನವರನ್ನು ಕೆಳಗೆ ಇಳಿಸೋದಿಲ್ಲ. ಆದರೆ, ನಮ್ಮ ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಯಡಿಯೂರಪ್ಪ ಅಲ್ಲ ಅವರ ಪುತ್ರ ವಿಜಯೇಂದ್ರ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಎಂದು ಕುಟುಕಿದ ಬೇಳೂರು, ವಿಜಯೇಂದ್ರ ಉಪ್ಪಾರಪೇಟೆ ಪಿಎಸ್ಐ ವರ್ಗಾವಣೆಗೆ 50 ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂದು ಆರೋಪಿದರು.