ಶಿವಮೊಗ್ಗ: ಶರಾವತಿ ಹಿನ್ನೀರಿನಿಂದ ಭೂಮಿ ಕಳೆದುಕೊಂಡು ಪರದಾಡುತ್ತಿರುವ ಸಂತ್ರಸ್ತರ ಸಮಸ್ಯೆಗೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಎಡವಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ ನಾ ಶ್ರೀನಿವಾಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆಯ ಬಗ್ಗೆ ಸಿಎಂ ಮೇಲೆ ಒತ್ತಡ ತರುವಲ್ಲಿ ಜಿಲ್ಲೆಯ ಎಲ್ಲ ಶಾಸಕರು ವಿಫಲರಾಗಿದ್ದಾರೆ. ಸಂಸದ ಬಿ ವೈ ರಾಘವೇಂದ್ರ ಅವರು ಅಭಿವೃದ್ದಿ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶರಾವತಿ ಪುನರ್ ವಸತಿ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಒಂದು ಸಭೆ ನಡೆಸಲಾಯಿತು. 9.600 ಎಕರೆ ಭೂಮಿಯನ್ನು ಹೈ ಕೋರ್ಟ್ ರದ್ದು ಮಾಡಿದ್ದನ್ನು ದೆಹಲಿಗೆ ಹೋಗಿ ಸರಿ ಮಾಡುವುದಾಗಿ ಹೇಳಿ 1 ವರ್ಷ ಆಗಿದೆ. ಆದರೂ ಸಹ ಅದಕ್ಕೆ ಪರಿಹಾರ ಕಂಡು ಹಿಡಿಯಲಿಲ್ಲ. ಅಂದು ಸಭೆ ನಡೆದ ಬಗ್ಗೆ ನಿರ್ಣಯವನ್ನೇ ದಾಖಲು ಮಾಡಿಲ್ಲ. ಇದರಿಂದ ಸಿಎಂ, ಮಾಜಿ ಸಿಎಂ ಹಾಗೂ ಜಿಲ್ಲೆಯ ಮಂತ್ರಿ ಹಾಗೂ ಶಾಸಕರಿಗೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.
1 ಸಾವಿರ ಜನಕ್ಕೆ 3600 ಸಾವಿರ ಎಕರೆ ಭೂಮಿಯನ್ನು ಕಾಗೋಡು ತಿಮ್ಮಪ್ಪ ನೀಡಿದ್ದರು. ಆದರೆ, ಈಗಿನ ಸರ್ಕಾರ ವಜಾ ಮಾಡಿದೆ. ಇದು ಸರ್ಕಾರ ಜನ ಮತ್ತು ರೈತ ಸಮುದಾಯದ ವಿರೋಧಿ ಎಂದು ತೋರಿಸುತ್ತದೆ. ಮೊನ್ನೆ ಬಿ.ಎಸ್. ಯಡಿಯೂರಪ್ಪ ಈಡಿಗರ ಸಮುದಾಯ ಭವನದಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆಯನ್ನು 15 ದಿನದಲ್ಲಿ ಪರಿಹಾರಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿ ಬದ್ದರಾಗಿರಬೇಕು ಎಂದು ಆಗ್ರಹಿಸಿದರು.
ಭೂಕಬಳಿಕೆ ಕೇಸನ್ನು ರದ್ದು ಮಾಡುವಂತೆ ಆಗ್ರಹ: ಜಿಲ್ಲೆಯ ಸಮಸ್ಯೆ ಪರಿಹರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಮತ್ತು 3,500 ಜನರ ಮೇಲೆ ಭೂಕಬಳಿಕೆ ಕೇಸು ದಾಖಲಿಸಲಾಗಿದೆ, ಇದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೆ.ಎಸ್.ಆರ್.ಟಿ.ಸಿ ಗೆ ಚಾಲಕರು ಬೇಕೆಂದು ಜಾಹೀರಾತು.. ಸನ್ಮಾರ್ಗ ಎನ್.ಜಿ.ಓ ವಿರುದ್ಧ ದೂರು