ಶಿವಮೊಗ್ಗ: ಅರುಣ್ ಸಿಂಗ್ ರಾಜ್ಯ ಬಿಜೆಪಿಯ ಉಸ್ತುವಾರಿಗಳಿದ್ದಾರೆ. ಅವರು ಕರ್ನಾಟಕಕ್ಕೆ ಬಂದು ಹೋಗುತ್ತಿರುತ್ತಾರೆ. ಅವರು ಬಂದು ಹೋಗುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿಕಾರಿಪುರದ ತಾಲೂಕು ಆಡಳಿತ ಭವನದಲ್ಲಿ ನಡೆದ ತಾಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಅರುಣ್ ಸಿಂಗ್ ಉಸ್ತುವಾರಿ ಇರುವುದರಿಂದ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ನಮ್ಮ ಶಿವಮೊಗ್ಗ ಜಿಲ್ಲೆ ಸೇರಿದಂತೆ ಇತರೆ 11 ಜಿಲ್ಲೆಗಳಲ್ಲಿ ಕೋವಿಡ್ ಇನ್ನೂ ನಿಯಂತ್ರಣಕ್ಕೆ ಬರಬೇಕಾಗಿರುವುದರಿಂದ ಇನ್ನೊಂದು ವಾರ ಲಾಕ್ಡೌನ್ ಮುಂದುವರೆಸಲಾಗುವುದು. ಜನರ ಸಹಕಾರ ಇದ್ದಾರೆ ಮಾತ್ರ ಕೋವಿಡ್ ನಿಯಂತ್ರಿಸಲು ಸಾಧ್ಯವಾಗುತ್ತದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿ, ಮಾಸ್ಕ್ ಬಳಸಿ ಕೋವಿಡ್ ನಿಯಂತ್ರಿಸಬೇಕಿದೆ. ಕೋವಿಡ್ ಸೋಂಕಿತರ ಪ್ರಮಾಣ ಶೇ. 5ಕ್ಕೆ ಬಂದರೆ ಲಾಕ್ಡೌನ್ ಸಡಿಲಿಕೆ ಮಾಡಬಹುದಾಗಿದೆ. ಹೀಗಾಗಿ ಕೋವಿಡ್ ನಿಯಂತ್ರಣದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ಎರಡು ಪ್ಯಾಕೇಜ್ಗಳನ್ನು ಘೋಷಣೆ ಮಾಡಲಾಗಿದೆ. ಅವಶ್ಯವಿದ್ದರೆ ಇನ್ನೊಂದು ಪ್ಯಾಕೇಜ್ ಘೋಷಣೆ ಮಾಡುವ ಚಿಂತನೆ ನಡೆಸಲಾಗುವುದು ಎಂದರು. ತಮ್ಮ ಸ್ವಕ್ಷೇತ್ರ ಶಿಕಾರಿಪುರದ ಬಗ್ಗೆ ಮಾತನಾಡಿದ ಅವರು, ತಾಲೂಕಿನ ಕೋವಿಡ್ ನಿರ್ವಹಣೆ ಹಾಗೂ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಕೋವಿಡ್ ಪರಿಸ್ಥಿತಿಯ ಕುರಿತು ಚರ್ಚಿಸಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ಸಿಎಂ ತಿಳಿಸಿದರು.
ಶಿಕಾರಿಪುರದ ಮೂರು ಹೋಬಳಿಗಳಿಗೆ ನೀರಾವರಿ ಯೋಜನೆ ಮಂಜೂರು ಮಾಡಲಾಗಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಯೋಜನೆಗಳು ರೈತರಿಗೆ ಸಮಾಧಾನ ತಂದಿದೆ ಎಂದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ಡಿಸಿ ಕೆ.ಬಿ.ಶಿವಕುಮಾರ್ ಇದ್ದರು.
ಓದಿ: ಸ್ವಕ್ಷೇತ್ರ ಶಿಕಾರಿಪುರದಲ್ಲಿ ತಾಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಬಿಎಸ್ವೈ