ಶಿವಮೊಗ್ಗ: ಸರ್ಕಾರಿ ನೌಕರರು ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಡಳಿತ ಯಂತ್ರದ ಜೊತೆಗೆ ಸಹಕರಿಸಬೇಕು. ತಮ್ಮ ಹುದ್ದೆಗಳ ಮಹತ್ವ ತಿಳಿದುಕೊಂಡರೆ ಉತ್ತಮವಾಗಿ ಕೆಲಸ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರಿಗೆ ತಿಳಿಸಿದರು. ಶಿವಮೊಗ್ಗದಲ್ಲಿ ನಡೆದ ಮೊದಲ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಆಡಳಿತ ಸುಧಾರಣೆ ಬಗ್ಗೆ ಎರಡನೇ ಆಯೋಗ ವರದಿ ನೀಡಿದೆ. ಸರ್ಕಾರ ಏಕಪಕ್ಷೀಯವಾಗಿ ನಿರ್ಣಯ ಮಾಡಲು ಆಗಲ್ಲ. ನಾವು-ನೀವು ಎಲ್ಲರೂ ಸರ್ಕಾರದ ಭಾಗ. ಜಾಗತೀಕರಣ, ಖಾಸಗೀಕರಣ ಹಾಗೂ ಉದಾರೀಕರಣಗಳ ಪರಿಣಾಮ ನಮ್ಮ ನೌಕರರ ಮೇಲೂ ಬೀರಿದೆ. ಬದಲಾದಂತಹ ಪರಿಸ್ಥಿತಿಯಲ್ಲಿ ನಮ್ಮ ಕೆಲಸದ ಶೈಲಿ ಬದಲಾಗಬೇಕು ಎಂದರು.
ವಿಧಾನಸೌಧದಿಂದ ಗ್ರಾಮ ಪಂಚಾಯತಿವರೆಗೂ ಇ-ಆಡಳಿತ ಬಂದಿದೆ. ನೀವು ಕಾಲಕ್ಕೆ ತಕ್ಕಂತೆ ಬದಲಾಗಿ. ನಿಗದಿತ ಸಮಯದಲ್ಲಿ ಕೆಲಸ ಮಾಡಿ, ಜನರ ಓಡಾಟ ಕಡಿಮೆ ಆಗುತ್ತದೆ. ದಕ್ಷತೆಯಿಂದ ಕೆಲಸ ಮಾಡಿದರೆ ಭ್ರಷ್ಟಾಚಾರ ಕಡಿಮೆ ಆಗುತ್ತದೆ ಎಂದು ಸಿಎಂ ಹೇಳಿದರು.
ಇದೇ ವೇಳೆ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಯ ಒಟ್ಟು 20 ಜನರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಚಿವರಾದ ಆರಗ ಜ್ಞಾನೇಂದ್ರ, ಅಶ್ವತ್ಥನಾರಾಯಣ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಲಕ್ಷ್ಮಣ ಸವದಿ, ಅಶೋಕ ನಾಯ್ಕ್ ಸೇರಿದಂತೆ ಹಲವರಿದ್ದರು.
ಇದನ್ನೂ ಓದಿ: ಶೇ.40 ಸರ್ಕಾರ ಮುಂದುವರಿಯುವುದು ಸರಿಯಲ್ಲ: ಭಾಸ್ಕರ್ ರಾವ್