ಶಿವಮೊಗ್ಗ: ರೆಸೆಪ್ ಒಪ್ಪಂದದಿಂದ ಭಾರತದ ರೈತರ ಕೃಷಿ, ಜೀವವೈವಿಧ್ಯತೆ ಹಾಗೂ ಸಾಮಾಜಿಕ ಜ್ಞಾನದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೆಟಿ ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ .ಸಿ.ಇ.ಪಿ( ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಮುಕ್ತ ವ್ಯಾಪಾರ ಒಪ್ಪಂದದಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕ ಶಾಶ್ವತವಾಗಿ ಶೂನ್ಯವಾಗಲಿದೆ. ಇದರಿಂದ ಕೃಷಿ ಉತ್ಪನ್ನಗಳ ಆಮದು ಹೆಚ್ಚಾಗುತ್ತದೆ. ಭಾರತದ ಲಕ್ಷಾಂತರ ಸಣ್ಣ ರೈತರು ವಿಶೇಷವಾಗಿ ಹೈನುಗಾರಿಕೆ ಕ್ಷೇತ್ರ ಅಪಾಯದ ಮಟ್ಟ ತಲುಪಲಿದೆ. ಬೀಜ ಕಂಪನಿಗಳು ಹೆಚ್ಚಿನ ಅಧಿಕಾರ ಪಡೆಯುತ್ತವೆ. ಈ ಎಲ್ಲ ಕಾರಣಗಳಿಂದ ಒಪ್ಪಂದವನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ನವೆಂಬರ್ ತಿಂಗಳಲ್ಲಿ ಹೈದರಾಬಾದ್ನಲ್ಲಿ ನಡೆಯುವ ಶೃಂಗಸಭೆಯಲ್ಲಿ ವಿಶ್ವದ 16 ದೇಶಗಳು ಭಾಗವಹಿಸಲಿದ್ದು ಸಂಸತ್ತಿನಲ್ಲಿ ರೆಸೆಪ್ ಬಗ್ಗೆ ಚರ್ಚೆ ಮಾಡದೆ ಈ ಒಪ್ಪಂದವನ್ನು ಒಪ್ಪಬಾರದು. ಏಕೆಂದರೆ ಭಾರತದ ದೇಶಿಯ ಮಾರುಕಟ್ಟೆ ಸಂಪೂರ್ಣ ನಾಶವಾಗುವ ಒಪ್ಪಂದಕ್ಕೆ ರೈತರ ವಿರೋಧವಿದೆ ಎಂದರು.