ಶಿವಮೊಗ್ಗ: ಶಿಕಾರಿಪುರದಲ್ಲಿ ಬಿ.ವೈ ವಿಜಯೇಂದ್ರ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯದಲ್ಲಿ ತಮ್ಮ ಕುಟುಂಬದವರ ಜೊತೆ ಸೇರಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಾಘವೇಂದ್ರ ಮಠದಲ್ಲಿ ಪೂಜೆ ಸಲ್ಲಿಸಿ, ಮಂತ್ರಾಲಯದ ಪ್ರಸಾದ ಸ್ವೀಕಾರ ಮಾಡಿ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಅವರು, ನಾನು ಹುಚ್ಚರಾಯಸ್ವಾಮಿ ಮತ್ತು ರಾಯರ ಮಠದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದೇನೆ. ಮೆರವಣಿಗೆ ನಂತರ ಬೃಹತ್ ಬಹಿರಂಗ ಸಮಾವೇಶ ನಡೆಯಲಿದೆ. ನಮ್ಮ ಶಕ್ತಿ ನಮ್ಮ ಪಕ್ಷದ ಕಾರ್ಯಕರ್ತರ ಪಡೆ. ನಮ್ಮ ಕಾರ್ಯಕರ್ತರು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಕಾರ್ಯಕರ್ತರ ಪಡೆ ನಮಗೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ಯುವಕರ ಹೊಸ ಪಡೆ ಮೋದಿ ಅವರ ಅಭಿವೃದ್ಧಿ ಮೆಚ್ಚಿ ನಮ್ಮ ಜೊತೆ ಸೇರಿದ್ದಾರೆ. ಕ್ಷೇತ್ರದಲ್ಲಿ ಮತದಾರರು ಯಡಿಯೂರಪ್ಪ ಅವರಿಗೆ, ಸಂಸದ ಬಿ ವೈ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದಾರೆ. ನನಗೂ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ.. ಶಿಕಾರಿಪುರದಲ್ಲಿ ಪ್ರಚಾರ ಮಾಡುವ ಜೊತೆಗೆ ರಾಜ್ಯದಲ್ಲಿ ಬೇರೆ ಬೇರೆ ಕಡೆ ಒಂದು ವಾರ ಪ್ರಚಾರ ಮಾಡುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಮತದಾರರು ನಮ್ಮ ತಂದೆ ಅವರಿಗೆ ನಿರಂತರವಾಗಿ ಆಶೀರ್ವಾದ ಮಾಡಿಕೊಂಡು, ಬೆಂಬಲಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಶಿಕಾರಿಪುರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ. ನನಗೆ ಮತದಾರರು ಆಶೀರ್ವಾದ ಮಾಡಲಿದ್ದಾರೆ. ದೊಡ್ಡ ಮಟ್ಟದಲ್ಲಿ ಗೆಲ್ಲಿಸಿಕೊಡಲಿದ್ದಾರೆ. ಚುನಾವಣೆಯನ್ನು ಚುನಾವಣೆಯಾಗಿಯೇ, ಸವಾಲನ್ನು ಸವಾಲಾಗಿಯೇ ಸ್ವೀಕಾರ ಮಾಡುತ್ತೇವೆ. ಅವುಗಳನ್ನು ಎದುರಿಸುತ್ತೇವೆ. ಖಂಡಿತವಾಗಿಯೂ ಯಶಸ್ವಿ ಆಗುತ್ತೇವೆ ಎಂದು ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ: ಪಕ್ಷದ ವರಿಷ್ಠರು ಶಿಕಾರಿಪುರದಿಂದ ಸ್ಪರ್ಧಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿಂದಲೇ ಸ್ಪರ್ಧಿಸುತ್ತಿರುವುದು ನನ್ನ ಸೌಭಾಗ್ಯ. ಬಿಜೆಪಿ ಗೆಲ್ಲಬೇಕೆಂಬುದು ಜನರ ಆಶಯ. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆಯನೂರು ಮಂಜುನಾಥ್ ಜೆಡಿಎಸ್ನಿಂದಲೇ ಸ್ಪರ್ಧೆ, 70 ಅಭ್ಯರ್ಥಿಗಳ ಪಟ್ಟಿ ಇಂದೇ ರಿಲೀಸ್: ಕುಮಾರಸ್ವಾಮಿ
ನಾಮಪತ್ರ ಸಲ್ಲಿಕೆ ನಂತರ ಪುನಃ ಮೆರವಣಿಗೆ ಮೂಲಕ ಸಾಗಿದರು. ಮೆರವಣಿಗೆಯಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ನಾರಾಯಣ ಸ್ವಾಮಿ, ಸಚಿವರಾದ ಎಂಟಿಬಿ ನಾಗರಾಜ್, ಕುಡಚಿ ಶಾಸಕ ರಾಜೀವ್, ಹಾಲಪ್ಪ, ಶೃತಿ ಹಾಗೂ ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸಹ ಭಾಗಿಯಾಗಿದ್ದರು.
ಇದನ್ನೂ ಓದಿ: ಹು-ಧಾ ಸೆಂಟ್ರಲ್ ಕ್ಷೇತ್ರ: ಕಾಂಗ್ರೆಸ್ನಿಂದ ಶೆಟ್ಟರ್ - ಬಿಜೆಪಿಯಿಂದ ಮಹೇಶ ಟೆಂಗಿನಕಾಯಿ ನಾಮಪತ್ರ ಸಲ್ಲಿಕೆ