ಶಿವಮೊಗ್ಗ : ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಹೆಸರಿಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸದನದಲ್ಲಿ ಈಗಾಗಲೇ ನಾನೇ ಈ ವಿಷಯ ಪ್ರಸ್ತಾಪಿಸಿ ಕೇಂದ್ರಕ್ಕೆ ಕಳುಹಿಸಿದ್ದೇನೆ. ಫೆ. 27ರಂದು ಪ್ರಧಾನಿಗಳಿಂದ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಮಾಡಿಸುತ್ತೇವೆ ಎಂದರು.
ಶಿವಮೊಗ್ಗದಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಗಳು ಬರುವುದು ನಿಶ್ಚಿತ. ಅದೇ ದಿನ, ಇಪ್ಪತ್ತನೆೇ ಶತಮಾನ ಕಂಡ ಕವಿಸಂತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಕುವೆಂಪು ಅವರ ಹೆಸರನ್ನು ವಿಮಾನ ನಿಲ್ದಾಣಕ್ಕಿಡಲು ತೀರ್ಮಾನಿಸಿದ್ದೇವೆ. ಸರ್ವಾನುಮತದಿಂದ ತೀರ್ಮಾನಿಸಿ ಹೆಸರನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದರು.
ಕುವೆಂಪು ಅವರು ತಮ್ಮ ಕವಿತೆ, ಬರವಣಿಗೆಗಳ ಮೂಲಕ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಅದನ್ನು ಜಾರಿಗೆ ತರಲು ಪ್ರಧಾನಿಗಳು ಹಗಲಿರುಲು ಶ್ರಮಿಸುತ್ತಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿಗಳ ಹೆಸರಿಡುವ ಕುರಿತು ಸದನದಲ್ಲಿ ನಾನೇ ಪ್ರಸ್ತಾಪಿಸಿ ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದರು. ಇದೇ ವೇಳೆ, ವಿಮಾನ ನಿಲ್ದಾಣವನ್ನು ಅತಿ ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ನಿರ್ಮಿಸಲಾಗಿದೆ. ನೈಟ್ ಲ್ಯಾಂಡಿಂಗ್‌ಗೆ ಬೇಕಿರುವ ಎಲ್ಲಾ ಸೌಕರ್ಯಗಳಿವೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಮೋದಿ ಹಾಗೂ ಅಮಿತ್ ಶಾ ಅವರ ಪ್ರವಾಸ ಬರುವ ದಿನಗಳಲ್ಲಿ ಜಾಸ್ತಿಯಾಗಲಿದೆ. ನಾವು ನೂರಕ್ಕೆ 140ಕ್ಕೂ ಹೆಚ್ಚು ಸೀಟು ಗೆದ್ದು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ನನಗೆ 80 ವರ್ಷ ತುಂಬುತ್ತಿದೆ. ಮುಂದಿನ ಚುನಾವಣೆ ಮಾಡುವ ಶಕ್ತಿಯನ್ನು ದೇವರು ಕೊಟ್ಟು ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ. ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ತಮ್ಮ ರಾಜಕೀಯ ಒಲವು ತಿಳಿಸಿದರು.
ಚುನಾವಣೆಗೆ ಸ್ಪರ್ಧಿಸಲ್ಲ: ಮುಂದಿನ ಐದು ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಆದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈಗಾಗಲೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಹ ಕೊಟ್ಟಿದ್ದೇನೆ. ಅಧಿಕಾರ, ಸ್ಥಾನಮಾನ ಇಲ್ಲದೆಯೂ ಪಕ್ಷ ಕಟ್ಟಬೇಕು, ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಇದಕ್ಕೆ ಜನರು ಸಹಕಾರ ಕೊಡುವ ನಂಬಿಕೆ ಇದೆ ಎಂದರು.
ಇದನ್ನೂ ಓದಿ: ಶಿವಮೊಗ್ಗ ಏರ್ಪೋರ್ಟ್ಗೆ ಯಡಿಯೂರಪ್ಪ ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ