ಶಿವಮೊಗ್ಗ: ವಿಜಯೇಂದ್ರ ವರುಣಾ ಕ್ಷೇತ್ರ ದಿಂದ ಸ್ಪರ್ಧಿಸುವುದಿಲ್ಲ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು. ಶಿಕಾರಿಪುರದ ಕುಮದ್ವತಿ ಕಾಲೇಜು ಮೈದಾನದಲ್ಲಿ ಸೋಮವಾರ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಗ್ರಾಮಾಂತರ ಭಾಗದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ ಜನತೆಯಲ್ಲಿ ಗೊಂದಲಬೇಡ, ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ, ಮೈಸೂರಿನ ವರುಣಕ್ಷೇತ್ರ ದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಲ್ಲು ತೂರಾಟ ಪ್ರಕರಣ ಮರೆತುಬಿಡೋಣ: ಕಲ್ಲು ತೂರಾಟ ಆಗಿರುವ ಬಗ್ಗೆ ಕಾಂಗ್ರೆಸ್ನವರು ಮಾಡಿದರು, ಇವರು ಮಾಡಿದರು, ಅವರು ಮಾಡಿದರು ಅಂತ ಬೇಡ. ಅದನ್ನು ಮರೆತು ಒಂದೇ ತಾಯಿಯ ಮಕ್ಕಳಂತೆ ಬದುಕೋಣ. ನಾನು ಬದುಕಿರುವವರೆಗೂ ಬಂಜಾರ, ಭೋವಿ ಹಾಗೂ ಕೊರಚ ಸಮುದಾಯವನ್ನು ಎಸ್ಟಿ ಪಟ್ಟಿಯಿಂದ ಕೈ ಬಿಡಲ್ಲ. ಮೀಸಲಾತಿ ಕುರಿತು ಈಗಾಗಲೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ರಾಜ್ಯದಲ್ಲಿ ಉದ್ದೇಶ ಪೂರ್ವಕವಾಗಿ ಗೊಂದಲವನ್ನುಂಟು ಮಾಡಲಾಗುತ್ತಿದೆ. ಇದು ಕೇವಲ ಶಿಕಾರಿಪುರದ ಸಮಸ್ಯೆ ಅಲ್ಲ, ರಾಜ್ಯದ ಜ್ವಲಂತ ಸಮಸ್ಯೆ. ಇದರಿಂದ ಈ ಸಮುದಾಯದವರನ್ನು ಎಸ್ಟಿ ಪಟ್ಟಿಯಿಂದ ಕೈ ಬಿಡಬಾರದು ಎಂದು ಶಾ ಅವರಿಗೆ ಹೇಳಿದ್ದೇನೆ. ಇದಕ್ಕೆ ಅವರು ಒಪ್ಪಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯದಲ್ಲಿ ಪಕ್ಷಸಂಘಟಿಸುವ ಮೂಲಕ ಜನಪ್ರಿಯ ಯುವನಾಯಕರಾಗಿ ಹೊರಹೊಮ್ಮಿದ್ದಾರೆ. ನನಗೆ ರಾಜಕೀಯ ಜನ್ಮ ನೀಡಿದ ಶಿಕಾರಿಪುರ ಕ್ಷೇತ್ರದಿಂದಲೇ ವಿಜಯೇಂದ್ರ ಸ್ಪರ್ಧೆ ನಡೆಸಲಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷಸಂಘಟಿಸುವ ಮೂಲಕ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ನನಗೆ ಹಾಗೂ ಸಂಸದ ರಾಘವೇಂದ್ರಗೆ ಆಶೀರ್ವದಿಸಿದಂತೆ ವಿಜಯೇಂದ್ರಗೂ ನೀವು ಆಶೀರ್ವಾದ ಮಾಡಬೇಕು ಎಂದು ಬಿಎಸ್ವೈ ಮನವಿ ಮಾಡಿದರು.
ಮನವೊಲಿಸಿ ಮತಹಾಕಿಸಬೇಕು: ಪಕ್ಷದ ಬಗ್ಗೆ ಬೇಸರ ಹಾಗೂ ಅಸಮಾಧಾನ ಇದ್ದವರ ಮನವೊಲಿಸಿ ಮತಹಾಕಿಸಬೇಕು. ಚುನಾವಣೆ ಸ್ಪರ್ಧಿಸಲು ಬಿಜೆಪಿ ಅಂತಿಮಪಟ್ಟಿ ಸಿದ್ದವಾಗುತ್ತಿದ್ದು, ಎರಡುಮೂರು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಲಿದೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾತಿ, ಧರ್ಮ ನೋಡದೇ ಎಲ್ಲರ ಅಭಿವೃದ್ಧಿಗೆ ಪೂರಕವಾದ ಯೋಜನೆ ನೀಡಿದ್ದೇನೆ. ನೀರಾವರಿ ಯೋಜನೆ ಸೇರಿದಂತೆ ತಾಲೂಕಿನ ಜನರ ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ನಡೆಸಿದ ತೃಪ್ತಿ ನನಗೆ ಇದೆ ಎಂದು ಇದೇ ವೇಳೆ ಹೇಳಿದರು.
ಬಿಎಸ್ವೈ ತಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆದ ದಿನ ಅವರು ಹೇಳಿದಂತೆ ಶಿಕಾರಿಪುರಕ್ಕೆ ಬಂದು ಬಂಜಾರ ಸಮುದಾಯದ ಮುಖಂಡರೋಂದಿಗೆ, ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗೂ ತಾಂಡಾಭಿವೃದ್ದಿ ನಿಗಮದ ಅದ್ಯಕ್ಷ ರಾಜೀವ್ ಜತೆ ಸೇರಿಸಿಕೊಂಡು ಸಭೆ ನಡೆಸಿ ಬಂಜಾರ್ ಸಮಾಜದ ಮುಖಂಡರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಬಳಿಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾನು ಈ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದು ನಮ್ಮ ಕುಟುಂಬದ ತೀರ್ಮಾನವಲ್ಲ. ತಾಲೂಕಿನ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡದಂತೆ ಸ್ಪರ್ಧಿಸಲು ಸಂಕಲ್ಪ ಮಾಡಿದ್ದೇನೆ. ನನಗೆ ಆಶೀರ್ವದಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡ ಡಿ.ಎಸ್.ಅರುಣ್, ಮುಖಂಡರಾದ ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ, ಎಚ್.ಟಿ.ಬಳಿಗಾರ್, ರಾಮಾನಾಯ್ಕ, ತೊಗರ್ಸಿ ಸಣ್ಣಹನುಮಂತಪ್ಪ, ಡಿ.ಟಿ.ಮೇಘರಾಜ್, ಭದ್ರಾಪುರ ಹಾಲಪ್ಪ, ಗಾಯತ್ರಿದೇವಿ, ವೀರೇಂದ್ರ ಪಾಟೀಲ್, ಟಿ.ಎಸ್.ಮೋಹನ್, ಎಸ್.ಎಸ್.ಪಾಟೀಲ್ ಹರೇಲಕೆರೂರು ಉಪಸ್ಥಿತರಿದ್ದರು.
ಇದನ್ನೂ ಓದಿ: ಗುರುವಾರ ಇಲ್ಲವೇ ಶುಕ್ರವಾರ ಹಾಸನದ ಟಿಕೆಟ್ ಫೈನಲ್ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ