ಶಿವಮೊಗ್ಗ: ಮುಖ್ಯಮಂತ್ರಿಗಳು ರಾಯಚೂರು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಸಮಯದಲ್ಲಿ ನಡೆದುಕೊಂಡಿರುವ ರೀತಿ ಒಂದು ರೀತಿಯಲ್ಲಿ ಗೂಂಡಾಗಿರಿಯಂತೆ ಹಾಗೂ ಸರ್ವಾಧಿಕಾರಿಯಂತಿದೆ. ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಯಾವುದೇ ವಿಶ್ವಾಸ ಇಲ್ಲದೆ ಇರುವ ರೀತಿಯಲ್ಲಿ ಮಾತನಾಡಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವನಗೌಡ ನಾಯಕ್ ನಾಲ್ಕೈದು ಸಾವಿರ ಜನರೊಂದಿಗೆ ಮನವಿ ಕೊಡಲು ಬಂದಾಗ, ಎಂಟು ಕಿಲೋ ಮೀಟರ್ ದೂರದಲ್ಲಿಯೇ ತಡೆದು ಯುದ್ಧ ಮಾಡಲು ಬರುತ್ತಿದ್ದಾರೆನ್ನುವಂತೆ ಹಗುರವಾಗಿ ಮಾತನಾಡಿದ್ದಾರೆ. ಚುನಾಯಿತ ಪ್ರತಿನಿಧಿ ಬಗ್ಗೆ ಹಗುರವಾಗಿ ಮಾತನಾಡಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂದರು.
ಬಿಜೆಪಿಗೆ ಮತ ಹಾಕಿ, ನಮ್ಮ ಹತ್ತಿರ ಯಾಕೆ ಬರುತ್ತೀರಾ ಹೇಳಿಕೆ ಮುಖ್ಯಮಂತ್ರಿ ಅವರಿಗೆ ಶೋಭೆ ತರುವುದಿಲ್ಲ. 28 ಕ್ಷೇತ್ರಗಳ ಪೈಕಿ 26 ಕ್ಷೇತ್ರದಲ್ಲಿ ಬಿಜೆಪಿಗೆ ಜನ ಆಯ್ಕೆ ಮಾಡಿ ಕಳಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಮಾನ ಮರ್ಯಾದೆ ಕಿಂಚಿತ್ತು ಇದ್ದರೆ ಅವತ್ತೇ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ನೀವು ಗೆದ್ದಿರುವುದು ಕೇವಲ ಒಂದೇ ಸ್ಥಾನ ಎಂದು ಟೀಕಿಸಿದರು.
ಅಪ್ಪ-ಮಕ್ಕಳ ಪಾರ್ಟಿಯಲ್ಲಿ ತಂದೆಯವರೇ ಸೋತಿದ್ದಾರೆ. ಈ ರೀತಿಯಲ್ಲಿ ಜನ ನಿಮಗೆ ಛೀಮಾರಿ ಹಾಕಿ ನಿಮ್ಮ ಆಡಳಿತದಿಂದ ಬೇಸತ್ತಿದ್ದಾರೆ ಎಂದರು. ಚುನಾವಣೆ ಪೂರ್ವದಲ್ಲಿ 2 ಲಕ್ಷದವರೆಗಿನ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿ ಬರಿ ಅಂಕಿ-ಅಂಶ ಹೇಳುತ್ತಿದ್ದೀರಿ. ಜನ ಬರಗಾಲ ಅನುಭವಿಸುತ್ತಿದ್ದಾರೆ. ಮೊದಲು ಬರಗಾಲಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ನಂತರ ಗ್ರಾಮ ವಾಸ್ತವ್ಯ ಕೈಗೊಳ್ಳಿ ಎಂದು ಸಲಹೆ ನೀಡಿದರು.