ಶಿವಮೊಗ್ಗ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭರವಸೆ ಕೊಟ್ಟು ಬಂದಿದ್ದೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಯಶಸ್ವಿಯಾಗಿ ನಡೆಯಿತು ಎಂದರು.
ನಂತರ ಮಾತನಾಡಿದ ಅವರು, ದೇಶದ ಆಯಾ ರಾಜ್ಯಗಳ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ, ಮುಂದಿನ ಚುನಾವಣೆ ಗೆಲ್ಲುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಮೋದಿಯವರು ಸುಮಾರು ಒಂದು ಗಂಟೆಗಳ ಕಾಲ ನಮಗೆ ಮಾರ್ಗದರ್ಶನ ನೀಡಿದರು ಎಂದರು. ಕಾರ್ಯಕಾರಿಣಿಯಲ್ಲಿ ಭಾಗಿಯಾಗಿ ಬಹಳ ಉತ್ಸಾಹದಿಂದ ನಾವೆಲ್ಲರೂ ವಾಪಸ್ ಬಂದಿದ್ದೇವೆ ಎಂದರು.
ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು, ಮುಂದಿನ ಚುನಾವಣೆಗಾಗಿ ಮೋದಿ ಹಾಗೂ ಅಮಿತ್ ಶಾ ಹೆಚ್ಚಿನ ಸಮಯವನ್ನು ಕೊಡುತ್ತಾರೆ ಎಂದರು. ಪ್ರಧಾನಿ ಮೋದಿಜೀ ಹಾಗೂ ಅಮಿತ್ ಷಾ ಅವರ ಸಮಯವನ್ನು ಸದುಪಯೋಗ ಪಡಿಸಿಕೊಂಡು 150 ಸ್ಥಾನ ಗೆಲ್ಲುತ್ತೇವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಭರವಸೆ ಕೊಟ್ಟು ಬಂದಿದ್ದೇವೆ. ಈ ವಿಶ್ವಾಸ ನನಗಿದೆ, ಅದರಂತೆ ಕೆಲಸ ಮಾಡುತ್ತೇವೆ ಎಂದರು.
ಅಲ್ಪಸಂಖ್ಯಾತರನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ: ಮೋದಿಜಿ ಅವರು ನಮಗೆ ಅನೇಕ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಸ್ಥಳೀಯ ಕಾರ್ಯಕರ್ತರು ಹಾಗೂ ಶಾಸಕರು ಹೆಚ್ಚಿನ ಕೆಲಸ ಮಾಡಬೇಕಿದೆ, ಆಗ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು. ಮನೆ ಮನೆಗೆ ಕಾರ್ಯಕರ್ತರು ಭೇಟಿ ಮಾಡಿ ಪಕ್ಷದ ಕುರಿತು ಪ್ರಚಾರ ನಡೆಸಬೇಕು ಎಂದರು. ಈಗಾಗಲೇ ನಾವು ಚುನಾವಣಾ ಕೆಲಸ ಪ್ರಾರಂಭಿಸಿದ್ದೇವೆ. ಅಲ್ಪಸಂಖ್ಯಾತರನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಈ ಬಗ್ಗೆ ಮೋದಿಜಿ ಅವರು ನಮಗೆ ಸಲಹೆ ನೀಡಿದ್ದಾರೆ. ಈಗಾಗಲೇ ನಾವು ಮುಸ್ಲಿಂ ಬಾಂಧವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ, ಹಾಗೆ ನಮ್ಮ ಬಗ್ಗೆ ಅವರಿಗೂ ಗೌರವವಿದೆ ಎಂದರು.
ವಿಜಯೇಂದ್ರ ಅವರ ಕುರಿತು ಚರ್ಚೆ ನಡೆದಿಲ್ಲ: ವಿಜಯೇಂದ್ರ ಅವರ ಕುರಿತು ಯಾವುದೇ ವಿಚಾರಗಳು ಆ ಸಭೆಯಲ್ಲಿ ಚರ್ಚೆ ಆಗಿಲ್ಲ. ಅದಕ್ಕೆ ಸಮಯವೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಗುಜರಾತ್ ಚುನಾವಣೆಯಲ್ಲಿ ಹಿರಿಯ ಶಾಸಕರು ಹಾಗೂ ನಾಯಕರುಗಳಿಗೆ ಕೋಕ್ ನೀಡಿರುವ ವಿಚಾರ ನನಗೆ ಗೂತ್ತಿಲ್ಲ ಎಂದ ಅವರು, ಹರಿಪ್ರಸಾದ್ ಹೇಳಿಕೆ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನಾ ವಿಚಾರ: ಶಿವಮೊಗ್ಗದ ವಿಮಾನ ನಿಲ್ದಾಣದ ಎಲ್ಲ ಕೆಲಸ ಪೂರ್ಣ ಆಗಿದೆ. ಇದರ ಉದ್ಘಾಟನೆಗೆ ಪ್ರಧಾನಿಗಳು ಒಂದು ದಿನ ಸಮಯವನ್ನು ಕೊಡಬಹುದು. ಮುಂದಿನ ತಿಂಗಳು 27 ರ ಒಳಗೆ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ ಎಂದರು. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ ಎಂದೂ ಇದೇ ವೇಳೆ ಅವರು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು: ಡಾ. ಸಿ ಅಶ್ವತ್ಥ ನಾರಾಯಣ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿಯವರಿಂದ ಫೆ.,27 ರಂದು ಸೋಗಾನೆ ವಿಮಾನ ನಿಲ್ದಾಣ ಲೋಕಾರ್ಪಣೆ:ಪ್ರಧಾನಿ ನರೇಂದ್ರ ಮೋದಿಯವರಿಂದ ಫೆ.27 ರಂದು ಸೋಗಾನೆ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು. ಶಿವಮೊಗ್ಗ ಹೊರವಲಯದಲ್ಲಿರುವ ವಿಮಾನ ನಿಲ್ದಾಣ ಅಂತಿಮ ಹಂತದ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿಗಳನ್ನು ಭೇಟಿ ಮಾಡಿ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ವಿವರಿಸಲಾಗಿದೆ. ಫೆ.27 ಕ್ಕೆ ನೂರಕ್ಕೆ ನೂರು ಪ್ರಧಾನಿಗಳೇ ಬಂದು ಲೋಕಾರ್ಪಣೆ ಮಾಡುವುದು ನಿಶ್ಚಯ ಆಗಿದೆ ಎಂದರು.
ಅಧಿಕಾರಿಗಳು ಬಾಕಿ ಇರುವ ಸಣ್ಣಪುಟ್ಟ ಕೆಲಸವನ್ನು ಅಷ್ಟರೊಳಗೆ ಮುಗಿಸುತ್ತಾರೆ ಎನ್ನುವ ನಂಬಿಕೆ ಇದೆ. ದೇಶದಲ್ಲೇ ಅತಿ ಕಡಿಮೆ ವೆಚ್ಚ 449 ಕೋಟಿಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿರುವುದನ್ನು ಕಲ್ಪನೆ ಮಾಡಿಕೊಳ್ಳಲು ಸಹ ಸಾಧ್ಯ ಇಲ್ಲ ಎಂದು ಅಭಿಪ್ರಾಯಪಟ್ಟರು. ಇಲ್ಲಿ ರಾತ್ರಿ ವೇಳೆಯಲ್ಲಿಯು ವಿಮಾನಗಳು ಇಳಿಯಲು ವ್ಯವಸ್ಥೆ ಮಾಡಲಾಗಿದೆ, ಬೆಂಗಳೂರು ನಂತರದ ಅತಿದೊಡ್ಡ ವಿಮಾನ ನಿಲ್ದಾಣ ಇದಾಗಿದೆ ಎಂದರು. ಜಮೀನು ಕೊಟ್ಟ ರೈತರಿಗೆ ಎಷ್ಟೇ ಅಭಿನಂದನೆ ಸಲ್ಲಿಸಿದರು ಕಡಿಮೆಯೇ ಎಂದು ಬಿಎಸ್ ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದರು.
ನಂತರ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ಈಗಾಗಲೇ ಅಧಿಕಾರಿಗಳ ನೇಮಕ ಸಹ ಆಗಿದೆ ಸಿಬ್ಬಂದಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ಸಹ ನೀಡಲಾಗುತ್ತಿದೆ. ಒಂದು ವಾರದೊಳಗೆ ಅಧಿಕಾರಿಗಳು ಬಂದು ಭೇಟಿ ಸಹ ನೀಡಲಿದ್ದಾರೆ ಹಾಗೂ ಈಗಾಗಲೇ ಏರ್ ಲೈನ್ಸ್ ಗಳ ಜೊತೆ ಮಾತುಕತೆ ನಡೆಯುತ್ತಿದ್ದು, ಸ್ಟಾರ್ಏರ್ ಲೈನ್ಸ್ ಮುಂದೆ ಬಂದಿದೆ. ಬೆಂಗಳೂರು, ಶಿವಮೊಗ್ಗ ನಡುವೆ ಏರ್ಲೈನ್ಸ್ ಒಡಾಡಲಿದೆ ಎಂದರು.
ಫೆ. 27 ರಂದು 7500 ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ: ಫೆ. 27 ರಂದು 7500 ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿಗಳ ಲೋಕಾರ್ಪಣೆಯಾಗಲಿದೆ ಎಂದರು. ಶಿಕಾರಿಪುರ-ರಾಣೇಬೆನ್ನೂರು ರೈಲ್ವೆ ಮಾರ್ಗಕ್ಕೆ ಚಾಲನೆ, ರೈಲ್ವೆ ಡಿಪೋ, ಸ್ಮಾರ್ಟ್ ಸಿಟಿ ಕಾಮಗಾರಿ ಲೋಕಾರ್ಪಣೆ ಆಗಲಿದೆ ಎಂದರು. ಜಮೀನು ಕೊಟ್ಟ ರೈತರಿಗೆ ವಿಮಾನ ನಿಲ್ದಾಣ ಲೋಕಾರ್ಪಣೆ ವೇಳೆಗೆ ಮಾತುಕೊಟ್ಟಂತೆ ಸೈಟ್ ಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಈ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ,ಎಸ್ ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.