ಶಿವಮೊಗ್ಗ: ನಮ್ಮ ರಾಜ್ಯದಲ್ಲಿ ಸುಂದರವಾದ ಹಳ್ಳಿ ಆಗುಂಬೆ. ಈ ಹೆಸರು ಕೇಳಿದರೆ ಹಲವರಿಗೆ ಥಟ್ ಅಂತ ನೆನಪಾಗುವುದು, ಡಾ. ರಾಜ್‌ಕುಮಾರ್ ಸಿನಿಮಾ ಹಾಡು. ಆಕಸ್ಮಿಕ ಸಿನಿಮಾದಲ್ಲಿ ಅಣ್ಣಾವ್ರು ಆಗುಂಬೆಯ ಪ್ರೇಮ ಸಂಜೆಯಾ ಎಂದು ಹಾಡುತ್ತಾ, ಕಾಡಿನತ್ತ ಕೈ ತೋರಿಸುತ್ತಿದ್ದರೆ, ರಮಣೀಯ ಪರಿಸರಕ್ಕೆ ಮನಸ್ಸು ಸೋಲುತ್ತಿತ್ತು. ಕನ್ನಡ ಸಾಹಿತ್ಯದ ಮೇರು ಕವಿ, ಲೇಖಕರಿಂದ ಹಿಡಿದು ಜನಸಾಮಾನ್ಯರ ಗೀತ ರಚನೆಕಾರ ಹಂಸಲೇಖ ಅವರಿಗೆ ಈ ಸೌಂದರ್ಯ ವರ್ಣಿಸದೇ ಇರುವವರಿಲ್ಲ.
ವಿಶ್ವಶ್ರೇಷ್ಠ ಜೀವವೈವಿಧ್ಯ ತಾಣ ಎಂದು ಗುರುತಿಸಿಕೊಳ್ಳುವ ಈ ಪರಿಸರ, ಕಾಳಿಂಗ ಸರ್ಪಗಳ ಆವಾಸ ಸ್ಥಳವೂ ಹೌದು. ದುರಂತ ಎಂದರೆ ಮನುಷ್ಯನ ವಿಕೃತಿಗೆ ಆಗುಂಬೆ ಪರಿಸರ ಅರ್ಧ ನಶಿಸಿ ಇನ್ನರ್ಧ ಕುರುಹುವಿನಂತೆ ಕಾಣಿಸುತ್ತಿದೆ. ಇಲ್ಲಿನ ಕಾಡು ಮೇಡು ತ್ಯಾಜ್ಯ ವಸ್ತುಗಳ ಬೀಡಾಗಿದೆ. ಅರಣ್ಯ, ಕಂದಾಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಆಗುಂಬೆ ಪರಿಸರ ಹಾಳು ಮಾಡುತ್ತಿದ್ದಾರೆ. ಅದಕ್ಕೆ ಒಂದು ಉದಾಹರಣೆ, ಆಗುಂಬೆ ಕ್ರಾಸ್ ಬಳಿ ಇರುವ ಈ ಗ್ರೀನ್‌ಪಾಯಿಂಟ್.
ಇಲ್ಲಿನ ಹತ್ತಾರು ಎಕರೆ ಜಾಗ ಗೋಮಾಳಕ್ಕೆ ಸೇರಿದೆ. ಇದಕ್ಕೆ ಹೊಂದಿಕೊಂಡಂತೆ ಆಗುಂಬೆ ರೇನ್ ಫಾರೆಸ್ಟ್ ರಿಸರ್ಚ್ ಸೆಂಟರ್ ಇದೆ. ಸುತ್ತಲ ಜಾಗ ನಿಷೇಧಿತ ಅರಣ್ಯ ಪ್ರದೇಶವಾಗಿದೆ. ಕಾನೂನು ಪ್ರಕಾರ, ಅಕ್ರಮ ಪ್ರವೇಶಕ್ಕೂ ನಿಷೇಧವಿರಬೇಕು. ಆದರೆ, ಇಲ್ಲಿ ಮಾತ್ರ ಕಸದ ರಾಶಿ ತುಂಬಿದೆ. ದುರಾದೃಷ್ಟಕರ ಸಂಗತಿ ಎಂದರೆ ಆಗುಂಬೆ ಗ್ರಾಮ ಪಂಚಾಯಿತಿ ವರೆಗೂ ಕೂಡ ಇಲ್ಲಿ ಕಸ ತಂದು ಸುರಿಯುತ್ತಾರೆ.
ಹೀಗೆ ಕಾಲಿಟ್ಟಲ್ಲೆಲ್ಲ ಕಸ, ಮದ್ಯದ ಬಾಟೆಲ್‌ಗಳು. ನೂರಾರು ಟನ್ ತ್ಯಾಜ್ಯ ಇಲ್ಲಿ ಬಿದ್ದಿದೆ. ಆದರೆ ಯಾರೂ ಗಮನ ಹರಿಸೋದಿಲ್ಲ. ಕಸ ತಂದು ಸುರಿಯುವುದು ಒಂದು ಕಡೆಯಾದರೆ, ಪಡ್ಡೆಗಳಿಗೂ ಇದು ಅಚ್ಚುಮೆಚ್ಚಿನ ಅಡ್ಡ. ಎಲ್ಲೆಲ್ಲಿಂದಲೋ ಬರುವ ಪ್ರವಾಸಿಗರು ಅದರಲ್ಲೂ ಯುವ ಜನತೆ ತಿಂದು ಮಜಾ ಮಾಡಿ ಹೋಗೋದು ಇದೇ ಪ್ರದೇಶದಲ್ಲಿ. ಎದೆಬಡಿದು ಸಾಯುವಷ್ಟು ಜೋರು ಹಾಡು, ಕೈಯಲ್ಲಿ ಬಾಟೆಲ್ ಹಿಡಿದು, ಮತ್ತಲ್ಲಿ ಡಾನ್ಸ್ ಮಾಡುತ್ತಿರುತ್ತಾರೆ.
ಯಾರಿಗೂ ಇಲ್ಲವಾಗಿದೆ ಪರಿಸರ ಕಾಳಜಿ: ಹೋಗುವಾಗ ಎಲ್ಲ ತರಹದ ವಸ್ತುಗಳನ್ನೂ ಸಹ ಅಲ್ಲೇ ಬಿಸಾಡ್ತಾರೆ. ಅದರಲ್ಲೂ ಮೋಜು-ಮಸ್ತಿಗೆ ಆಗಾಗ ಘಾಟಿ ಹತ್ತಿ ಜಾಲಿ ರೈಡ್ ಬರುವವರು ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಯುವಕರು. ಪ್ರತಿದಿನ ನೂರಾರು ಜನ ಬೈಕ್, ಕಾರ್ ಗಳಲ್ಲಿ ಇಲ್ಲಿಗೆ ಬರುತ್ತಾರೆ. ಆಗುಂಬೆ ಕ್ರಾಸ್‌ನ ಹೋಟೆಲ್‌ಗಳು, ತೀರ್ಥಹಳ್ಳಿ ಅಧಿಕಾರಿಗಳ ಗಮನಕ್ಕಿದ್ದರೂ ಯಾರಿಗೂ ಪರಿಸರದ ಕಾಳಜಿ ಇಲ್ಲ.
ಈ ಜಾಗದಲ್ಲಿ ಮಹಿಳೆಯರ ಓಡಾಟಕ್ಕೂ ಕಷ್ಟ : ಈ ಕುರಿತು ನಮ್ಮ ಜೊತೆ ಮಾತನಾಡಿದ ಸ್ಥಳೀಯರಾದ ಶಿವಕುಮಾರ್, ಈ ಅನಾಹುತ ಎಲ್ಲರಿಗೂ ಗೊತ್ತಿದೆ. ಆದರೆ ತಡೆಯುವ ಮನಸ್ಸು ಯಾರಿಗೂ ಇಲ್ಲ ಎಂದರು. ಇಲ್ಲಿ ಕಸ, ಮದ್ಯದ ಬಾಟೆಲ್ ಜೊತೆ ಸತ್ತ ಹಸುಗಳನ್ನೂ ತಂದು ಬಿಸಾಡಿ ಹೋಗುತ್ತಾರೆ. ಹೋಟೆಲ್‌ಗಳ ತ್ಯಾಜ್ಯವೂ ಸಹ ಇಲ್ಲೇ ಬೀಳುತ್ತಿದೆ. ಮೊದಲೆಲ್ಲಾ ಹೀಗಿರಲಿಲ್ಲ. ಈಗ ಮಹಿಳೆಯರೂ ಸಹ ಈ ಭಾಗದಲ್ಲಿ ಓಡಾಡೋದು ಕಷ್ಟವಾಗಿದೆ. ಆಗುಂಬೆ ಗ್ರಾಮ ಪಂಚಾಯಿತಿ ಗಮನಕ್ಕೂ ಇದೇ ಆದರೆ ಯಾವುದೇ ಬದಲಾವಣೆಯಾಗಿಲ್ಲ ಎನ್ನುತ್ತಾರೆ.
ಇದನ್ನೂ ಓದಿ: ರಸ್ತೆ ಬದಿ ಬೇಕಾಬಿಟ್ಟಿ ಕಸ ಎಸೆದ ವ್ಯಕ್ತಿಯಿಂದಲೇ ಸ್ವಚ್ಛಗೊಳಿಸಿದ ಪಾಲಿಕೆ ಸಿಬ್ಬಂದಿ