ಶಿವಮೊಗ್ಗ: ನಾಮಕರಣ ಶಾಸ್ತ್ರಕ್ಕೆ ಹೋಗುವ ವೇಳೆ ಟಂಟಂ ಆಟೋಗೆ ಬೊಲೆರೊ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಟಂಟಂ ಆಟೋದಲ್ಲಿದ್ದ ಹತ್ತಕ್ಕೂ ಹೆಚ್ಚು ಮಂದಿಗೆ ಗಾಯವಾಗಿ, ಓರ್ವ ಸಾವನ್ನಪ್ಪಿರುವ ಘಟನೆ ಶಿಕಾರಿಪುರದಲ್ಲಿ ನಿನ್ನೆ(ಗುರುವಾರ) ರಾತ್ರಿ ನಡೆದಿದೆ.
ಶಿಕಾರಿಪುರ ತಾಲೂಕಿನ ಬಿದರಕೊಪ್ಪ ತಾಂಡಾದಿಂದ ಎಳನೀರು ಕೊಪ್ಪ ತಾಂಡಾಕ್ಕೆ ಶಾಸ್ತ್ರಕ್ಕೆ ಹೋಗುವಾಗ ಶಿಕಾರಿಪುರ ತಾಲೂಕು ಜಕ್ಕನಹಳ್ಳಿ ಬಳಿ ಅಪಘಾತವಾಗಿದೆ. ಟಂಟಂ ಆಟೋದಲ್ಲಿ ಹಿಂಬದಿ ಹೊರಗೆ ಕಾಲು ಚಾಚಿಕೊಂಡು ಕುಳಿತುಕೊಂಡಿದ್ದವರ ಕಾಲಿಗೆ ಗಂಭೀರ ಗಾಯವಾಗಿದೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಎಲ್ಲರನ್ನು ತಕ್ಷಣ ಶಿಕಾರಿಪುರದ ಸಾರ್ವಜನಿಕರ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ರಾಮಜೀ ನಾಯ್ಕ(70) ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ದೌಡಾಯಿಸಿದ ಸಂಸದರು: ಜಕ್ಕನಹಳ್ಳಿಯಲ್ಲಿ ನಡೆದ ಅಪಘಾತದ ಸುದ್ದಿ ತಿಳಿಯುತ್ತಿದ್ದಂತಯೇ ಆಸ್ಪತ್ರೆಗೆ ಸಂಸದ ಬಿ.ವೈ. ರಾಘವೇಂದ್ರ ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಬಂದು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಪಘಾತದ ವಿವರ ಪಡೆದ ಸಂಸದರು, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೂವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಊಟಿಯಲ್ಲಿ ಅಪಘಾತ: ತಮಿಳುನಾಡಿನ ಊಟಿಯಲ್ಲಿ ಗುರುವಾರ ಕಾರು ಅಪಘಾತಕ್ಕೊಳಗಾಗಿ ಮೈಸೂರಿನ ಬಿಜೆಪಿ ಮುಖಂಡರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇತರರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಮೃತರನ್ನು ಮೈಸೂರು ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಎಂದು ಗುರುತಿಸಲಾಗಿದೆ.
ಬುಧವಾರ ಸ್ವಾಮಿಗೌಡ ಅವರು ತಮ್ಮ ಸ್ನೇಹಿತ ಜಗದೀಶ ಗೌಡ ಕುಟುಂಬದೊಂದಿಗೆ ಊಟಿಗೆ ತೆರಳಿದ್ದರು. ಸ್ವಾಮಿಗೌಡ, ಜಗದೀಶ್ ಗೌಡ, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಊಟಿ ಪ್ರವಾಸಕ್ಕೆ ಮುಗಿಸಿಕೊಂಡು ಮೈಸೂರಿಗೆ ತೆರಳುತ್ತಿದ್ದ ವೇಳೆ ಕೂಡ್ಲೂರು ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ವಾಮಿಗೌಡ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೃತಪಟ್ಟಿದ್ದಾರೆ.
ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ವಾಮಿಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಜಗದೀಶ್ ಗೌಡ ಕುಟುಂಬದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇನ್ನು ನಿನ್ನೆ ಚಿತ್ರದುರ್ಗದಲ್ಲಿ ಅಹಮದಾಬಾದ್ನಿಂದ ತಮಿಳುನಾಡಿಗೆ ತೆರಳುತ್ತಿದ್ದ ಆ್ಯಂಬುಲೆನ್ಸ್ ನಿಂತ ಲಾರಿಗೆ ಗುದ್ದಿದ್ದರಿಂದ ಮೂವರು ಮೃತಪಟ್ಟಿದ್ದರು. ಇನ್ನು ಹಲವರು ತೀವ್ರವಾಗಿ ಗಾಯಗೊಂಡಿದ್ದರು.
ಮಧ್ಯಪ್ರದೇಶದಲ್ಲಿ ಬೊಲೆರೊಗೆ ಟ್ರಕ್ ಡಿಕ್ಕಿ: ನಿನ್ನೆ(ಗುರುವಾರ) ಬೆಳಗ್ಗೆ 10.30 ರ ಸುಮಾರಿಗೆ ಸಿಧಿಯ ಸಿಟಿ ಕೊತ್ವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಅತೀ ವೇಗದಿಂದ ಬಂದ ಟ್ರಕ್ ವಾಹನವೊಂದು ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಇಬ್ಬರು ಮಕ್ಕಳೂ ಸೇರಿ ಒಟ್ಟು 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಊಟಿಯಲ್ಲಿ ಕಾರು ಪಲ್ಟಿ.. ನರಸಿಂಹರಾಜ ವಿಧಾನಸಭಾ ಕ್ಷೇತ್ರ ಬಿಜೆಪಿ ಮುಖಂಡ ಇನ್ನಿಲ್ಲ