ಶಿವಮೊಗ್ಗ: ಭಾರತೀಯ ಜನತಾ ಪಾರ್ಟಿಯನ್ನು ಪೂರ್ಣ ಬೆಂಬಲದ ಮೂಲಕ ಅಧಿಕಾರಕ್ಕೆ ತರಬೇಕು ಎಂದು ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯು 140 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ಸೈನ್ಸ್ ಮೈದಾನದ ಬೂತ್ ಸಂಖ್ಯೆ 163 ರಲ್ಲಿ ತಮ್ಮ ಕುಟುಂಬ ಸಮೇತ ಮತದಾನ ಮಾಡಿ ಮಾತನಾಡಿದ ಅವರು, ಈಗಾಗಲೇ ನಾನು ಕುಟುಂಬದ ಸಮೇತ ಶಿವಮೊಗ್ಗದಲ್ಲಿ ಮತದಾನ ಮಾಡಿದ್ದೇನೆ. ಈಗಾಗಲೇ 20ರಿಂದ 25ರಷ್ಟು ಮತದಾನ ಆಗಿದೆ. ಈ ಬಾರಿ ಹೆಚ್ಚು ಮತದಾನ ಆಗುವ ನಿರೀಕ್ಷೆಯಿದೆ ಎಂದರು.
ಶಿವಮೊಗ್ಗ ನಗರದಲ್ಲಿ ನಾವು ಗೆಲ್ಲುತ್ತೇವೆ. ನಮ್ಮ ಪಕ್ಷದ ಸಂಘಟನೆ ಬಹಳ ಶಕ್ತಿಶಾಲಿಯಾಗಿದೆ. ಇಲ್ಲಿ ಹಿಂದುತ್ವದ ಅಲೆ ಇದೆ. ಅದರಂತೆ ನಾವು ಇಲ್ಲಿನ ಎಲ್ಲಾ ಸಮಾಜದ ಅಭಿವೃದ್ಧಿಯ ಕೆಲಸವನ್ನು ಮಾಡಿಕೊಟ್ಟಿದ್ದೇವೆ. ಹೀಗಾಗಿ ಅವರೆಲ್ಲರೂ ನಮಗೆ ಬೆಂಬಲ ಕೊಡುತ್ತಾರೆ. ಅತಿ ಹೆಚ್ಚು ಮತಗಳ ಅಂತರದಿಂದ ನಮ್ಮ ಗೆಲುವು ನಿಶ್ಚಿತ. ನನ್ನ ಚುನಾವಣೆಗೆ ಕೆಲಸ ಮಾಡಿದ ಕಾರ್ಯಕರ್ತ ಅಭ್ಯರ್ಥಿ ಆಗಿರುವುದು ಸಂತೋಷವಾಗಿದೆ ಎಂದರು.
ಖಂಡಿತಾ ಬಿಜೆಪಿ ಅಧಿಕಾರಕ್ಕೆ ಬರುತ್ತದೆ: ಚುನಾವಾಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಬಂದರು. ಇದರಿಂದ ಇಂಪ್ಯಾಕ್ಟ್ ಆಗುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತಾ ಇಂಪ್ಯಾಂಕ್ಟ್ ಆಗುತ್ತೆ. ಇವತ್ತು ಮೋದಿ ಹಾಗೂ ಅಮಿತ್ ಶಾ ಎಂದರೆ ಅವರಿಬ್ಬರು ಇವತ್ತು ಮಾದರಿ ರಾಜಕಾರಣಿಗಳು.ಅವರ ಬಗ್ಗೆ ಟೀಕೆ ಮಾಡುವಂತಹದ್ದು ಏನೂ ಉಳಿದಿಲ್ಲ. ಹಾಗಾಗಿ ಅವರ ಪ್ರಭಾವ ಖಂಡಿತಾ ರಾಜ್ಯದ ಮೇಲಾಗುತ್ತೆ. ಖಂಡಿತಾ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ನವರು ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಪ್ರಣಾಳಿಕೆಯನ್ನು ಇಟ್ಟುಕೊಂಡು ಹೋದರೆ ಇದು ಹಿಂದೂಗಳಿಗೆ ಬಹಳ ನೋವಾಗುತ್ತೆ. ಬಜರಂಗದಳ ನಿಷೇಧ ಮಾಡುವುದಕ್ಕೆ ಅದೊಂದು ರಾಷ್ಟ್ರೀಯವಾದಿ ಸಂಘಟನೆ. ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಿ ಮಾಡಿದಂತಹ ಸಂಘಟನೆ. ಅದನ್ನೇ ಇವರು ಬ್ಯಾನ್ ಮಾಡಲು ಮುಂದಾಗಿದ್ದಾರೆ. ಆದರೆ, ಅದು ಯಾವುದೋ ಪಿಎಫ್ಐ ಅಂತಹ ಸಂಘಟನೆಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇದನ್ನು ಜನರು ಗಮನಿಸುತ್ತಾ ಬಂದಿದ್ದಾರೆ ಎಂದರು.
ಮುಂದೆ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಬಹುಮತ ಬರಲ್ಲ ಎಂದು ಅವರಿಗೆ ಗೊತ್ತಾಗಿದೆ. ಇದರಿಂದ ಅವರೇ ಅತಂತ್ರ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ, ಡಿಕೆಶಿ ಯಾವತ್ತೂ ಒಟ್ಟಾಗುವವರಲ್ಲ: ಕಾಂಗ್ರೆಸ್ನ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಎಂದೂ ಒಗ್ಗಟ್ಟಾಗಿ ಇರೋದಿಲ್ಲ. ಅವರಿಬ್ಬರೂ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದು ಭಕ್ತಿಯಿಂದ ಅಲ್ಲ. ಬದಲಾಗಿ, ಹಿಂದೂಗಳ ಮತಕ್ಕಾಗಿ ಎಂದರು.
ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲುವುದಿಲ್ಲ. ನಮ್ಮ ಅಭ್ಯರ್ಥಿ ಸೋಮಣ್ಣ ಗೆಲ್ಲುತ್ತಾರೆ ಎಂದರು. ಹಿಂದೂ ವಿರೋಧಿಗಳಾದ ಅವರು ಭಕ್ತಿಯಿಂದ ಹೋಗಿಲ್ಲ. ಹಿಂದೂಗಳಿಗೆ ನಾವು ನಿಮ್ಮ ಪರವಾಗಿ ಇದ್ದೇವೆ ಅಂತ ತೋರಿಸಲಿಕ್ಕೆ ಹೋಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಹಾಸನದಲ್ಲಿ ಹೆಚ್.ಡಿ.ದೇವೇಗೌಡ ದಂಪತಿಯಿಂದ ಮತದಾನ- ವಿಡಿಯೋ