ಶಿವಮೊಗ್ಗ: ಭದ್ರಾವತಿ ಪಟ್ಟಣದ ಆಶಾಕಿರಣವಾಗಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉತ್ಪಾದನಾ ಕಾರ್ಯವನ್ನು ಪುನಾರಂಭಿಸಿದೆ. ಇದರಿಂದ ಕಾರ್ಖಾನೆಯ ಕಾರ್ಮಿಕರಲ್ಲಿ ಸಂತಸ ಮನೆ ಮಾಡಿದೆ. ನಿನ್ನೆಯಿಂದ ಕಾರ್ಖಾನೆಯ ಎನ್‌ಆರ್‌ಎಂ ಘಟಕ ಆರಂಭಗೊಂಡಿದೆ. 6 ದಿನಗಳ ಹಿಂದೆ ಉಕ್ಕು ಪ್ರಾಧಿಕಾರದ ಬಿಲಾಯ್ ಘಟಕದಿಂದ 19 ರೈಲು ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳು ಕಾರ್ಖಾನೆಗೆ ಬಂದಿದ್ದವು. ಇದರಿಂದ ಎನ್‌ಆರ್‌ಎಂ ಘಟಕ ಕಾರ್ಯವನ್ನು ಶುರು ಮಾಡಿದೆ.
ವಿಐಎಸ್ಎಲ್ ಕಾರ್ಖಾನೆಯು ಆಗಸ್ಟ್ 10 ರಿಂದಲೇ ಪ್ರಾರಂಭವಾಗಬೇಕಿತ್ತು. ಆದರೆ NRM ಘಟಕದ ವಿದ್ಯುತ್ ವಿಭಾಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಅಲ್ಲದೆ ಕಚ್ಚಾ ವಸ್ತುಗಳು ಕಾರ್ಖಾನೆಗೆ ಬರುವುದು ತಡವಾಯಿತು. ಇದರಿಂದ ನಿನ್ನೆಯಿಂದ ಕಾರ್ಖಾನೆಯಲ್ಲಿ ಕೆಲಸ ಪ್ರಾರಂಭವಾಗಿದೆ. ಕಾರ್ಮಿಕರು ಬ್ಲೂಮ್ಗೆ ಹಾಗೂ ಮಿಷನ್ಗಳಿಗೆ ಪೂಜೆ ಸಲ್ಲಿಸಿ ಕೆಲಸವನ್ನು ಪ್ರಾರಂಭಿಸಿದ್ದಾರೆ.
ಗುತ್ತಿಗೆ ಕಾರ್ಮಿಕರ ಧರಣಿ ಮುಂದುವರಿಕೆ: ವಿಐಎಸ್ಎಲ್ನ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಪುನಾರಂಭವಾಗಬೇಕು ಹಾಗೂ ದುಡಿಯುವ ಕೈಗಳಿಗೆ ಕೆಲಸ ಸಿಗಬೇಕೆಂದು ಆಗ್ರಹಿಸಿ ಕಳೆದ 8 ತಿಂಗಳಿಂದ ಗುತ್ತಿಗೆ ಕಾರ್ಮಿಕರು ಧರಣಿ ನಡೆಸುತ್ತಿದ್ದರು. ಈಗ ಕಾರ್ಖಾನೆ ಪ್ರಾರಂಭವಾದರು ಸಹ ತಮ್ಮ ಧರಣಿಯನ್ನು ಮುಂದುವರೆಸುವುದಾಗಿ ತಿಳಿಸಿರುವ ಗುತ್ತಿಗೆ ಕಾರ್ಮಿಕರ ಸಂಘ, ಕಾರ್ಮಿಕರಿಗೆ ಕಡ್ಡಾಯವಾಗಿ 26 ದಿನ ಕೆಲಸ ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಯನ್ನು ಆಗ್ರಹಿಸಿದೆ.
ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸುವ ಕುರಿತು ಹಾಗೂ ಖಾಸಗಿ ಮಾರಾಟ ಮಾಡುವ ಕುರಿತು ಟೆಂಡರ್ ಕರೆದಾಗ ಯಾರೂ ಸಹ ಮುಂದೆ ಬಾರದೆ ಇರುವ ಕಾರಣ ಸೆಲ್ನವರು ಈಗ ಉತ್ಪಾದನೆಗೆ ಮುಂದಾಗಿದ್ದಾರೆ. ವಿಐಎಸ್ಎಲ್ ಉತ್ಪಾದನೆ ಮಾಡುವ ವಸ್ತುಗಳಿಗೆ ಭಾರತೀಯ ಸೈನ್ಯದಲ್ಲಿ ಸಾಕಷ್ಟು ಬೇಡಿಕೆ ಇದೆ. ಸಂಸದ ಬಿ ವೈ ರಾಘವೇಂದ್ರ ಅವರು ದೆಹಲಿ ಮಟ್ಟದಲ್ಲಿ ನಡೆಸಿದ ಸತತ ಪ್ರಯತ್ನದ ಫಲವಾಗಿ ಕಾರ್ಖಾನೆ ಪುನಾರಂಭ ಮಾಡಿದೆ. ಸೆಲ್ ನಿಂದ ಒಂದು ವರ್ಷದ ಅವಧಿಗೆ ಕಾರ್ಖಾನೆಯು ಕಾರ್ಯ ನಿರ್ವಹಿಸಲಿದೆ.
ಇದನ್ನೂ ಓದಿ: KIA walkway: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ 420ಮೀಟರ್ಗಳ ಎಲಿವೇಟೆಡ್ ವಾಕ್‌ವೇ
ಕಾರ್ಖಾನೆ ಮುಚ್ಚಲು ತೀರ್ಮಾನಿಸಿದ್ದ ಕೇಂದ್ರ ಸರ್ಕಾರ: ಕೆಲವು ತಿಂಗಳ ಹಿಂದೆ 102 ವರ್ಷದ ಹಳೆಯ ಕಾರ್ಖಾನೆಯಾದ ಶಿವಮೊಗ್ಗದ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಪಿ) ಯನ್ನು ಮುಚ್ಚಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಹಣಕಾಸು ಇಲಾಖೆ ರಾಜ್ಯ ಸಚಿವ ಭಾಗವತ್ ಕರದ್, ತೀರಾ ಹಳೆಯದಾದ ಕಾರ್ಖಾನೆಯ ಪುನರುಜ್ಜೀವನಕ್ಕೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಫಲ ಕಾಣದ ಕಾರಣ ಅದನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದರು.
ನಷ್ಟದಲ್ಲಿರುವ ಕಾರ್ಖಾನೆಯನ್ನು ಸರ್ಕಾರ ಖಾಸಗೀಕರಣಗೊಳಿಸಲು ಯೋಜಿಸಿತ್ತು. ಅದರಂತೆ 2019 ರ ಜುಲೈನಲ್ಲಿ ಕಾರ್ಖಾನೆಯ ಎಲ್ಲ ಪಾಲನ್ನು ಮಾರಾಟ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ, ನಷ್ಟದಲ್ಲಿರುವ ಘಟಕವನ್ನು ಮುನ್ನಡೆಸಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿ ಘಟಕವನ್ನು ಬಂದ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದರು. ಹಳೆಯ ಯಂತ್ರೋಪಕರಣಗಳು, ನಿರಂತರ ನಷ್ಟ, ದೀರ್ಘಕಾಲದವರೆಗೆ ಇಲ್ಲಿನ ಯಂತ್ರಗಳು ಸ್ಥಗಿತಗೊಂಡಿರುವ ಕಾರಣ, ಘಟಕ ಅನುತ್ಪಾದಿತವಾಗಿದೆ. ಮುಚ್ಚುವುದೊಂದೇ ಈಗಿರುವ ದಾರಿ ಎಂದು ಸಚಿವರು ಹೇಳಿದ್ದರು.