ಶಿವಮೊಗ್ಗ: ಭದ್ರೆಯ ಪ್ರವಾಹಕ್ಕೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆಯಾಗಿದೆ. ಭದ್ರಾವತಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಭಾಗ ಹಾದು ಹೋಗುವ ಭದ್ರೆ ತನ್ನಲ್ಲಿ ಈಗ ಹೊಸ ಸೇತುವೆ ಮುಳುಗಿಸಿಕೊಂಡಿದೆ. ಹೊಸ ಸೇತುವೆಯು ರಸ್ತೆ ಮಟ್ಟಕ್ಕಿಂತ ಕೆಳ ಮಟ್ಟದಲ್ಲಿದೆ. ಇದರಿಂದ ಭದ್ರಾ ನದಿಗೆ ಹೆಚ್ಚಿನ ನೀರು ಬಿಟ್ಟಾಗ ಸೇತುವೆ ಮುಳುಗಡೆಯಾಗುತ್ತದೆ.
ಸದ್ಯ ಹೊಸ ಸೇತುವೆ ಮೇಲೆ ಮೂರು ಅಡಿ ನೀರು ಹರಿಯುತ್ತಿದೆ. ಹಾಲಿ ಭದ್ರಾ ಅಣೆಕಟ್ಟೆಯಿಂದ 34 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದರ ಪರಿಣಾಮ ಹೊಸ ಸೇತುವೆ ಮುಳುಗಿದ್ದು, ಅಕ್ಕಪಕ್ಕದ ಏರಿಯಾಗಳಿಗೂ ಸಹ ನೀರು ನುಗ್ಗಲು ಪ್ರಾರಂಭಿಸಿದೆ.
ಕವಲಗುಂದಿ, ಏನಾಕ್ಷಿ ಬಡಾವಣೆ ಬಿ.ಹೆಚ್.ರಸ್ತೆ ಪಕ್ಕದ ಅಂಬೇಡ್ಕರ್ ನಗರದಲ್ಲಿ ನೀರು ನುಗ್ಗಿದೆ. ಇದರಿಂದ ನಿನ್ನೆ ರಾತ್ರಿಯೇ ಕವಲಗುಂದಿ ಹಾಗೂ ಏನಾಕ್ಷಿ ಬಡಾವಣೆಯ ಜನರನ್ನು ಕಾಳಜಿ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ.
ಇನ್ನೂ ಈಗ ಅಂಬೇಡ್ಕರ್ ಬಡಾವಣೆ ಹಾಗೂ ಗುಂಡಪ್ಪ ಬಡಾವಣೆಗಳಿಗೆ ನೀರು ನುಗ್ಗಲು ಪ್ರಾರಂಭಿಸಿದೆ. ಇಲ್ಲಿನ ನಿವಾಸಿಗಳನ್ನು ಸಹ ಸಮೀಪದ ಕಾಳಜಿ ಕೇಂದ್ರಗಳಿಗೆ ರವಾನೆ ಆಗಲು ನಗರಸಭೆ ಸೂಚನೆ ನೀಡಿದೆ. ಉಳಿದಂತೆ ಹೊಸ ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗಿದ್ದು, ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ.
ಇದನ್ನೂ ಓದಿ: ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ: ಭದ್ರಾವತಿ ಹೊಸ ಸೇತುವೆ ಮುಳುಗಡೆ