ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಎರಡು ಪಕ್ಷಗಳ ನಡುವಿನ ಸಣ್ಣ ಗಲಾಟೆಯನ್ನು ರಾಜಕೀಯ ಪ್ರಭಾವ ಬಳಸಿ ಇಷ್ಟೊಂದು ದೊಡ್ಡದು ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್ ಸುಂದರೇಶ್ ಆರೋಪಿಸಿದರು.
ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯದಲ್ಲಿ ಆದ ಸಣ್ಣ ಗಲಾಟೆಯನ್ನು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಇಷ್ಟೊಂದು ದೊಡ್ಡಮಟ್ಟದಲ್ಲಿ ಗಲಾಟೆ ತಗೆದುಕೊಂಡು ಹೋಗಿದ್ದಾರೆ. ಹಾಗಾಗಿ ಈ ತರಹದ ದ್ವೇಷದ ರಾಜಕೀಯ ಮಾಡುವುದನ್ನು ಇವರು ಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಕಬಡ್ಡಿ ಪಂದ್ಯ ನಡೆಸಲು ಹಾಕಿದ್ದ ಮ್ಯಾಟ್ ಅನ್ನು ಪಟಾಕಿ ಸಿಡಿಸಿ ಸುಟ್ಟಿದ್ದೇ ಗಲಾಟೆಗೆ ಕಾರಣ. ಇದನ್ನು ದೊಡ್ಡದು ಮಾಡುವ ಮೂಲಕ ಭದ್ರಾವತಿಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಇಷ್ಟು ವರ್ಷಗಳ ಕಾಲ ರಾಜಕೀಯ ಮಾಡಿದರೂ ಈ ರೀತಿಯ ಸೇಡಿನ ರಾಜಕಾರಣವನ್ನು ಮಾಡಿಲ್ಲ. ಭದ್ರಾವತಿಯಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿ ಇಲ್ಲ ಎನ್ನುವ ಕಾರಣದಿಂದ ಕೋಮು ಭಾವನೆ ಕೇರಳಿಸುವಂತ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಬ್ಬ ಶಾಸಕರ ಮೇಲೆ 307 ಪ್ರಕರಣ ದಾಖಲಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರು ಪೊಲೀಸರಿಗೆ ಒತ್ತಡ ಹೇರಿ ಕಾಂಗ್ರೆಸ್ ಕಾರ್ಯಕರ್ತರ ಲಿಸ್ಟ್ ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷದ ನಾಯಕರು ಇಂತಹ ದ್ವೇಷದ ರಾಜಕಾರಣ ಮಾಡುವುದನ್ನು ಬೀಡಬೇಕು ಎಂದು ಆಗ್ರಹಿಸಿದರು.