ಶಿವಮೊಗ್ಗ: ಸಾಗರದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಹಾಲಪ್ಪ ಅವರ ಸಮ್ಮುಖದಲ್ಲೇ ಹಲ್ಲೆ ನಡೆದಿದ್ದು, ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಸಾಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಹಲ್ಲೆ ಎನ್ನುವುದು ನಡೆಯಬಾರದು. ಅದು ಸಹ ಶಾಸಕರ ಸಮ್ಮುಖದಲ್ಲಿ ನಡೆದಂತಹ ಹಲ್ಲೆಯನ್ನ ಖಂಡಿಸಬೇಕಾಗಿದೆ. ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ಸರ್ವ ಸದಸ್ಯರ ಸಭೆಯಲ್ಲಿ ಶಾಸಕರ ಬೆಂಬಲಿಗರು ಮಾಡಿದ ಹಲ್ಲೆ ಮಾನವ ಸಮಾಜ ತಲೆ ತಗ್ಗಿಸುವಂತದ್ದು. ಹಲ್ಲೆ ನಂತರ ಜಗದೀಶಗೌಡ ಮತ್ತು ಶ್ರೀಪಾದ ಹೆಗಡೆ ನಿಸರಾಣಿಯವರ ಮನೆಗೆ ನಾನು ಭೇಟಿ ನೀಡಿ ಸಮಾಧಾನ ಹೇಳಿದ್ದೇನೆ. ನಾನು ಭೇಟಿ ನೀಡಿದಾಗ ಅವರು ಕುಟುಂಬದ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಅದರ ಶಾಪ ಶಾಸಕ ಹಾಲಪ್ಪಗೆ ತಟ್ಟಲಿದೆ ಎಂದು ಕಿಡಿಕಾರಿದರು.
ಪೊಲೀಸರು ಸಹ ಹಾಲಪ್ಪರ ಬೆಂಬಲಕ್ಕೆ ನಿಂತಿದ್ದಾರೆ : ಶ್ರೀಪಾದ ಹೆಗಡೆಯವರ ಹೆಂಡತಿ ಮತ್ತು ಮಗಳು ಹಲ್ಲೆಯಾದಾಗ ಅಳುತ್ತಿದ್ದರು. ಆದರೆ ಶಾಸಕ ಹಾಲಪ್ಪ ಅದನ್ನು ನೋಡಿ ನಗುತ್ತಿದ್ದರಂತೆ ಇದು ನೀಚತನದ ಪರಮಾವಧಿ. ಬಿಜೆಪಿ ಶಿಸ್ತಿನ ಪಕ್ಷ, ಆದರೆ ಹಲ್ಲೆ ನಡೆದ ಸ್ಥಳದಲ್ಲಿದ್ದ ಶಾಸಕರ ಮೇಲೆ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ವಿಷಯದಲ್ಲಿ ಪೊಲೀಸರು ಸಹ ಹಾಲಪ್ಪರ ಬೆಂಬಲಕ್ಕೆ ನಿಂತಿದ್ದಾರೆ. ಈವರೆಗೂ ಎಫ್ಐಆರ್ ದಾಖಲಾಗದಿರುವುದು ದುರಂತವೇ ಸರಿ ಎಂದು ದೂರಿದರು.
ಈ ವಿಷಯವನ್ನು ನಾನು ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಳಿ ಪ್ರಸ್ತಾಪಿಸುತ್ತೇನೆ. ಶಾಸಕರಾದವರು ಎಲ್ಲರನ್ನು ಜೊತೆಗೊಯ್ಯಬೇಕು. ಆದರೆ ಒಡೆದು ಆಳುವ ತಂತ್ರಮಾಡುವ ಕೆಲಸ ಶಾಸಕ ಹಾಲಪ್ಪ ಮಾಡುತ್ತಿದ್ದಾರೆ. ಶಾಸಕರಿಗೆ ಸಾಗರದ ಜನತೆ ಮತ ನೀಡಿದ್ದು, ಯಡಿಯೂರಪ್ಪನವರ ಮುಖ ನೋಡಿಯೇ ವಿನಃ ಹಾಲಪ್ಪನನ್ನು ನೋಡಿ ಅಲ್ಲ. ವಲಸಿಗರಾದವರು ಶಾಸಕರಾದರೇ ಹೊಡೆದಾಟವೇ ಗತಿ ಎಂದು ಆರೋಪಿಸಿದರು.
ಎಫ್ಐಆರ್ ದಾಖಲಿಸುವಂತೆ ಆಗ್ರಹ : ಈ ಕೂಡಲೇ ಶಾಸಕರು ಎಫ್ಐಆರ್ ಹಾಕದಂತೆ ಪೊಲೀಸರ ಮೇಲೆ ಹಾಕಿರುವ ಒತ್ತಡವನ್ನು ಹಿಂಪಡೆದು, ಅವರೇ ಎಫ್ಐಆರ್ ದಾಖಲಿಸಬೇಕು. ಅವರ ಸಮ್ಮುಖದಲ್ಲಿ ನಡೆದ ಹಲ್ಲೆಗೆ ಬೇರೆ ಯಾರೂ ಸಾಕ್ಷಿ ಬೇಡ. ನಮ್ಮ ಸಾಗರ ಶಾಂತವಾಗಿತ್ತು. ಈಗ ಗೂಂಡಾಗಿರಿ ನಗರ ಆಗುತ್ತಿದೆ. ನನ್ನ ಹತ್ತು ವರ್ಷಗಳ ಆಡಳಿತದಲ್ಲಿ ಎಲ್ಲಿಯೂ ಹಲ್ಲೆಗಳು, ಗೂಂಡಾ ವರ್ತನೆಗಳು ನಡೆದಿರಲಿಲ್ಲ. ಆದರೆ, ಹಾಲಪ್ಪ ಅವಧಿಯಲ್ಲಿ ನಿರಂತರವಾಗಿ ಹಲ್ಲೆಗಳಾಗುತ್ತಿವೆ. ಆಸ್ಪತ್ರೆಯಲ್ಲೂ ಹಲ್ಲೆ ಮಾಡಿದರು. ಪ್ರಶ್ನೆ ಮಾಡುವವರನ್ನು ಹೆದರಿಸಿಡುವ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರೇ ಕೆರೆಯ ಜಾಗ ಒತ್ತುವರಿ ..? : ಶಾಸಕರು ಸಂತೆ ಮಾರುಕಟ್ಟೆಯನ್ನು ಮದುವೆ ಆರತಕ್ಷತೆಗೆ ಬಳಸಿದ್ದಾರೆ. ಅದನ್ನು, ಕೂಡಲೇ ಲೋಕಾರ್ಪಣೆ ಮಾಡಬೇಕು. ಗಣಪತಿ ಕೆರೆ ವಿಚಾರದಲ್ಲಿ ಒತ್ತುವರಿ ಮಾಡಿದ್ದಕ್ಕೆ ಹಾಲಪ್ಪನವರಿಗೆ ನೋಟಿಸ್ ನೀಡಲಾಗಿದೆ. ಶಾಸಕರೇ ಕೆರೆಯ ಜಾಗ ಒತ್ತುವರಿ ಮಾಡಿದರೆ ಹೇಗೆ? ಇತ್ತೀಚೆಗೆ ಸಾಗರಕ್ಕೆ ಶಿವಾಜಿ ಜಯಂತಿಗೆಂದು ಬಂದಿದ್ದ ಆರ್ಎಸ್ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರು ಶಾಸಕರ ವಿರುದ್ಧ ಹರಿಹಾಯ್ದಿದ್ದರು ಎಂದರು.
ಅವರು ಬಿಜೆಪಿಯವರು ಈ ಹೇಳಿಕೆ ನೀಡಿರುವುದು ಅಧಿಕಾರಿಗಳಿಂದ ತಪ್ಪು ನಡೆಯಲು ಶಾಸಕರು ಕಾರಣ ಎಂದಾಗಿರಬಹುದು. ಜಗದೀಶಗೌಡರು ಮತ್ತು ಶ್ರೀಪಾದ ಹೆಗಡೆ ನಿಸರಾಣಿ ಇಬ್ಬರು ಬಿಜೆಪಿ ಪಕ್ಷದವರು ಸ್ವಪಕ್ಷದವರ ಮೇಲೆಯೇ ಹಲ್ಲೆ ನಡೆಸುವಷ್ಟು ನೀಚತನ ತೋರಿದ್ದಾರೆ ಎಂದು ಬೇಳೂರು ವಾಗ್ದಾಳಿ ನಡೆಸಿದರು.