ಶಿವಮೊಗ್ಗ: ಎಲ್ಲಾ ಮಠಾಧೀಶರು ವೀರಶೈವ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಒತ್ತಾಯಿಸಿಲ್ಲ. ಯಡಿಯೂರಪ್ಪ ಅವರನ್ನೇ ಮುಂದುವರೆಸಿ ಎಂದು ಒತ್ತಾಯಿಸಿದ್ದರು ಎಂದು ಬಸವಕೇಂದ್ರದ ಮರುಳಸಿದ್ದ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ವಯಸ್ಸಿನ ಕಾರಣವೋ ಏನೋ ಗೊತ್ತಿಲ್ಲ. ಅವರು ರಾಜೀನಾಮೆ ನೀಡಿದ್ದಾರೆ. ಬಿಎಸ್ವೈ ನಂತರ ಯಾರು ಎಂಬುವುದಕ್ಕೆ ಉತ್ತರ ಸಿಕ್ಕಿದೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ರೀತಿಯಲ್ಲಿ ಸಮರ್ಥವಾಗಿ ಆಡಳಿತ ನಡೆಸಿಕೊಂಡು ಹೋಗುವ ವಿದ್ಯಾವಂತರು.
ಅದರ ಜೊತೆಗೆ ಆಡಳಿತದ ಸುದೀರ್ಘ ಅನುಭವ ಇದೆ. ಇದರ ಜೊತೆಗೆ ಅವರ ತಂದೆಯವರ ಆಡಳಿತದ ಮಾರ್ಗದರ್ಶನವೂ ಅವರಿಗಿದೆ. ಹಾಗಾಗಿ ನಾಡಿಗೆ ಉತ್ತಮ ಆಡಳಿತ ನೀಡಲಿದ್ದಾರೆ. ಎಲ್ಲಾ ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.
ಸಮರ್ಥವಾಗಿ ಆಡಳಿತ ನಡೆಸುತ್ತಾರೆ
ನೂತನವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿಯವರು ಕೂಡ ಸಮರ್ಥವಾಗಿ ಆಡಳಿತ ನಡೆಸುತ್ತಾರೆ ಎಂದು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಕೂಡ ಗೃಹ ಸಚಿವರಾಗಿ ಆಡಳಿತ ನಡೆಸಿದ್ದಾರೆ. ಅದರಂತೆ ಮುಖ್ಯಮಂತ್ರಿಗಳಾಗಿ ಸಹ ಸಮರ್ಥವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಾರೆ. ಹಿಂದಿನ, ಪರಂಪರೆ ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯ ಮಾಡಲಿ ಎಂದು ಶುಭ ಕೋರಿದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮುಂದುವರೆಸುವಂತೆ ಆಗ್ರಹ ಮಾಡಿದ್ದು ನಿಜ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಸೂಕ್ತವೆನಿಸಿದವರನ್ನ ಆಯ್ಕೆ ಮಾಡುತ್ತಾರೆ. ಅದನ್ನು ನಾವು ವಿರೋಧಿಸಲ್ಲ. ಆದರೆ ಯಡಿಯೂರಪ್ಪ ಅವರನ್ನು ಪೂರ್ಣಾವಧಿ ಅಧಿಕಾರ ನಡೆಸಲು ಬಿಡಿ ಎಂದು ಅಪೇಕ್ಷೆ ಪಟ್ಟಿದ್ದೆವು. ಈಗ ಮುಖ್ಯಮಂತ್ರಿ ಆಗಿರುವವರನ್ನು ಸಹ ನಾವು ಸ್ವಾಗತಿಸುತ್ತೇವೆ ಎಂದರು.
ಓದಿ: ಬಸವರಾಜ ಬೊಮ್ಮಾಯಿ ಸಿಎಂ ಆಗ್ತಾರೆ ಎಂದಿದ್ದರಂತೆ ಚನ್ನಬಸವ ದೇಶಿಕೇಂದ್ರ ಶ್ರೀ