ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಲಾಟರಿ ಇಲ್ಲದೆ ಬಹುಮಾನ ಕೊಡಲು ಮುಂದಾಗಿದೆ ಎಂದು ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ನ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ನ ಭವನದಲ್ಲಿ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಬಿ.ವೈ.ವಿಜಯೇಂದ್ರ, ನಮ್ಮ ಡಬಲ್ ಇಂಜಿನ್ ಸರಕಾರ ಜನರಿಂದ, ಜನರಿಗಾಗಿ, ಜನರಿಗೋಸ್ಕರ ದುಡಿಯುತ್ತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿ ಮುನ್ನುಗುತ್ತಿದ್ದೇವೆ. ಬಿಜೆಪಿ ಸರ್ಕಾರ ಬಂದಾಗ ಮಾತ್ರ ನಾಡಿಗೆ ಒಳಿತಾಗುತ್ತದೆ ಎಂದು ತಮ್ಮ ಪಕ್ಷದ ಕುರಿತು ಭರವಸೆಯ ಮಾತಗಳನ್ನಾಡಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪ್ರಣಾಳಿಕೆಯನ್ನು ರಾಜ್ಯದ ಜನ ನೋಡಿದ್ದಾರೆ. ಅವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ಕಾಂಗ್ರೆಸ್ ಪ್ರಣಾಳಿಕೆ ಶ್ರೀಲಂಕಾ, ಪಾಕಿಸ್ತಾನದ ನಂತರ ಈ ದೇಶವನ್ನು ಕೆಟ್ಟ ಪರಿಸ್ಥಿತಿಗೆ ಕೊಂಡೊಯ್ಯುತ್ತದೆ. ದೇಶದ ಆರ್ಥಿಕತೆ ದಿವಾಳಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ ಎಂಬುದು ಕಾಂಗ್ರೆಸ್ನವರಿಗೂ ಗೊತ್ತಿದೆ. ಕೇವಲ ರಾಜ್ಯವಷ್ಟೇ ಅಲ್ಲದೇ ಇಡೇ ದೇಶವೇ ರಾಜ್ಯದ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಕಾಂಗ್ರೆಸ್ ಪಕ್ಷ ಪೊಳ್ಳು ಭರವಸೆ ನೀಡುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಚುನಾವಣೆಯಲ್ಲಿ ಜೆಡಿಎಸ್ಗೆ ಬಹುಮತ ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮುಂದುವರೆದು, ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಬಂಜಾರ ಸಮಾಜವನ್ನು ಎತ್ತಿಕಟ್ಟವುದು ಕಾಂಗ್ರೆಸ್ನ ಉದ್ದೇಶವಾಗಿತ್ತು. ಇದೀಗ ಸಮುದಾಯಕ್ಕೆ ಮೀಸಲಾತಿಯ ಮನವರಿಕೆ ಆಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ 75% ಮೀಸಲಾತಿ ಕೊಡ್ತೀವಿ ಅಂತಾರೆ. ಅಂಬೇಡ್ಕರ್ ಎಲ್ಲಾ ಸಮಾಜದ ಜನರಿಗೆ ಅನುಕೂಲ ಆಗಬೇಕು ಅಂತಾ ಸಂವಿಧಾನ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಬಗ್ಗೆ, ದೇಶದ ಬಗ್ಗೆ ಬದ್ದತೆ ಇಲ್ಲ. ಸ್ವಾತಂತ್ರ್ಯ ಬಂದು ನಿರಂತರವಾಗಿ ಆಡಳಿತ ನಡೆಸಿದ ಕಾಂಗ್ರೆಸ್ ಇವತ್ತಿಗೂ ಬಡವರು ಬಡವರಾಗಿರಬೇಕು, ಅವಿದ್ಯಾವಂತರು ಅವಿದ್ಯಾವಂತರಾಗಿರಬೇಕು ಎಂದು ಬಯಸಿದ್ದಾರೆ ಎಂದು ಕಿಡಿಕಾರಿದರು.
ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ: ಸಮಾನ ಹಕ್ಕು, ಸಮಾನ ನೀತಿ, ಸಮಾನ ಕಾನೂನು ಅತ್ಯಾವಶ್ಯಕ. ಈ ರೀತಿಯ ಕಾನೂನು ನಮ್ಮ ಪ್ರಣಾಳಿಕೆಯಲ್ಲಿದೆ. ನಮ್ಮ ಯೋಜನೆಯನ್ನು ನಾಡಿನ ಜನತೆಗೆ ತೋರಿಸುವ ಕೆಲಸ ಬಿಜೆಪಿ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಉತ್ಸಾಹದಲ್ಲಿದ್ದರು. ಆದರೆ ಕಳೆದೊಂದು ವಾರದಿಂದ ಎಲ್ಲವೂ ಬದಲಾಗಿದೆ. ಬಿಜೆಪಿ ಪರವಾದ ಅಲೆ ಇದೆ. ಹೀಗಾಗಿ ಕಾಂಗ್ರೆಸ್ಗೆ ದಿಕ್ಕೇ ತೋಚದಂತಾಗಿದೆ ಎಂದರು.
ಬಜರಂಗದಳ ನಿಷೇಧ ಹಾಸ್ಯಾಸ್ಪದ: ಬಜರಂಗದಳ ದೇಶದ ಪರವಾಗಿ ಹೋರಾಟ ಮಾಡುವ ಸಂಘಟನೆ. ಇದನ್ನು ನಿಷೇಧ ಮಾಡುತ್ತೇವೆ ಅನ್ನೋದು ಹಾಸ್ಯಾಸ್ಪದ. ಅವರು ಅಧಿಕಾರಕ್ಕೆ ಬಂದರೆ ತಾನೇ ನಿಷೇಧ ಮಾಡೋದು ಎಂದು ಕುಟುಕಿದರು.
ಸಂವಾದದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಿಗೇರೆ ಹಾಜರಿದ್ಧರು.
ಇದನ್ನೂ ಓದಿ: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟ ಈಶ್ವರಪ್ಪ: ಕೆಎಸ್ಇ ಮಾಡಿದ್ದು ಸರಿಯಲ್ಲ ಎಂದು ಖರ್ಗೆ ಗರಂ