ಶಿವಮೊಗ್ಗ: ಹರ್ಷ ಕೊಲೆಗಡುಕರಿಗೆ ಗಲ್ಲು ಶಿಕ್ಷೆಯಾಗಬೇಕು. ಇಲ್ಲವೇ ಅವರೆಲ್ಲರನ್ನೂ ಎನ್‌ಕೌಂಟರ್ ಮಾಡಿ ಸಾಯಿಸಬೇಕು ಮತ್ತು ಹಿಂದೂ ಯುವಕರ ಹತ್ಯೆಗಳು ಇಂದಿಗೆ ಕೊನೆಯಾಗಬೇಕು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಹತ್ಯೆಯಾದ ಹಿಂದೂ ಯುವಕ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾಡನಾಡಿದರು. ನಗರದಲ್ಲಿ ನಡೆದ ಹರ್ಷ ಹತ್ಯೆ ಅತ್ಯಂತ ನೋವಿನ ಮತ್ತು ರೋಷದ ಘಟನೆಯಾಗಿದೆ. ಶಿವಮೊಗ್ಗದಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಹಿಂದೂಗಳ ರಕ್ತ ಕುದಿಯುತ್ತಿದೆ. ಇಂತಹ ದುರ್ಘಟನೆ ನಡೆಯಬಾರದಿತ್ತು. ಇಲ್ಲಿಗೆ ಇಂತಹ ಘಟನೆಗಳು ಅಂತ್ಯವಾಗಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ರಾಜ್ಯದಲ್ಲಿ ನಡೆದ ಹಿಂದೂ ಯುವಕರ ಹತ್ಯೆಗೆ ಸಂಬಂಧಿಸಿದಂತೆ ಅರೋಪಿಗಳಿಗೆ ಜಾಮೀನು ಸಿಕ್ಕು ಹೊರಗೆ ಬರುತ್ತಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ಹೀಗಾಗಬಾರದು. ಹರ್ಷ ಹತ್ಯೆ ಆರೋಪಿಗಳು ಯಾವುದೇ ಕಾರಣಕ್ಕೂ ಜಾಮೀನು ಪಡೆದುಕೊಂಡು ಹೊರಬರಬಾರದು. ಅವರ ವಿರುದ್ಧ ಪೊಲೀಸರು ಕಠಿಣ ಕಾಯ್ದೆಗಳನ್ನು ಹಾಕಬೇಕು.
ಕೋಕಾ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಬೇಕು. ಇದಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಒಂದು ವರ್ಷದೊಳಗೆ ತೀರ್ಪು ಬಂದು ಅವರಿಗೆ ಗಲ್ಲು ಶಿಕ್ಷಯಾಗಬೇಕು. ಹೀಗಾಗದಿದ್ದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹರ್ಷನ ಕೊಲೆಗೆ ಬಳಸಿದ್ದು ಬೇರೇ ರಾಜ್ಯದ ಕಾರು: ಎಸ್ಪಿ ಲಕ್ಷ್ಮಿಪ್ರಸಾದ್
ನಾನು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಹರ್ಷ ಒಬ್ಬ ದೇಶ ಭಕ್ತ. ಆತನ ಸಾವು ವ್ಯರ್ಥವಾಗಬಾರದು. ಅವನ ಕೊಲೆ ಯಾವುದೇ ಸ್ವಾರ್ಥಕ್ಕೆ ನಡೆದಿಲ್ಲ. ಹಿಂದುತ್ವದ ಹಿನ್ನೆಲೆಯಲ್ಲಿ ಅವನ ಕೊಲೆಯಾಗಿದೆ. ಈ ರೀತಿಯ ಕೊಲೆಗಳಾದಾಗ ಹಿಂದೆ ಕೇವಲ ರಾಜಕಾರಣಿಗಳು ಮಾತ್ರ ಸಾಂತ್ವನ ಹೇಳುತ್ತಿದ್ದರು. ಆದರೆ ಈಗ ಇಡೀ ಹಿಂದೂ ಸಮಾಜವೇ ಹರ್ಷನ ಪರವಾಗಿ ನಿಂತಿದೆ ಎಂದರು.
ಹಳೆದ್ವೇಷ ಎಂಬ ಆಧಾರದಲ್ಲಿ ಇದನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಪೊಲೀಸರು ಮಾಡಬಾರದು. ಕೇವಲ 302 ಸೆಕ್ಷನ್‌ನಡಿ ಕೇಸ್ ಹಾಕಿ ಕೈ ತೊಳೆದುಕೊಳ್ಳಬಾರದು. ಆರೋಪಿಗಳು ತಪ್ಪಿಸಿಕೊಳ್ಳುವಂತಹ ಕಾಯ್ದೆಗಳನ್ನು ನಮೂದಿಸಬಾರದು. ಹಿಂದೂ ಯುವಕರ ಹತ್ಯೆಗಳು ಇಂದೇ ಕೊನೆಯಾಗಬೇಕು. ಈ ಹತ್ಯೆ ಸಾಮಾನ್ಯದವರು ಮಾಡಿಲ್ಲ. ಇದರ ಹಿಂದೆ ಹಲವು ಶಕ್ತಿಗಳಿವೆ. ತರಬೇತಿ ಪಡೆದವರು ಮಾತ್ರ ಇಂತಹ ಕೊಲೆಗಳನ್ನು ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಬಸವದೇವರ ಮಠದ ನಿಶ್ಚಲ ದೇಶೀಕೇಂದ್ರ ಶ್ರೀಗಳು ಕೂಡ ಉಪಸ್ಥಿರಿದ್ದು, ಹರ್ಷ ಕುಟುಂಬದವರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.