ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ರವರ ಹೆಸರು ಇಡುವ ಪ್ರಸ್ತಾಪ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಎಸ್.ಬಂಗಾರಪ್ಪ ಹೆಸರನ್ನು ನಾಮಕರಣ ಮಾಡಬೇಕು ಎಂದು ಜಿಲ್ಲಾ ಆರ್ಯ ಈಡಿಗ ಸಂಘ ಆಗ್ರಹಿಸಿದೆ. ಶಿವಮೊಗ್ಗ ಜಿಲ್ಲಾ ಈಡಿಗರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಆರ್ ಹುಲ್ತಿಕೊಪ್ಪ ಅವರು, ಎಸ್.ಬಂಗಾರಪ್ಪನವರು ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ.
ಇವರು ನೀಡಿದ ಅಕ್ಷಯ, ಆಶ್ರಯ ಯೋಜನೆ, ಗ್ರಾಮೀಣ ಕೃಪಾಂಕ ಯೋಜನೆ, ರೈತ ಮಕ್ಕಳಿಗೆ ಕೃಷಿ ಕಾಲೇಜಿನಲ್ಲಿ ಮೀಸಲಾತಿ ನೀಡಿದ್ದರು. ಇವರು ರಾಜ್ಯ ಅಲ್ಲದೇ, ದೇಶದಲ್ಲಿಯೇ ಧೀಮಂತ ನಾಯಕರಾಗಿದ್ದರು. ಇದರಿಂದ ಇವರ ಹೆಸರು ಶಾಶ್ವತವಾಗಿ ಉಳಿಯಬೇಕಾದರೆ ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಎಸ್.ಬಂಗಾರಪ್ಪ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು.
ಎಸ್.ಬಂಗಾರಪ್ಪನವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಕೇವಲ ನಮ್ಮದೊಂದೆ ಸಮಾಜದ ಬೇಡಿಕೆಯಲ್ಲ ಉಳಿದ ಎಲ್ಲಾ ಸಮಾಜದವರು ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತು ನಮ್ಮ ಸಮಾಜವು ಸೇರಿದಂತೆ ಇತರೆ ಸಮಾಜದವರು ಸಹ ಮನವಿಯನ್ನು ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮಾಡಲಾಗಿದೆ. ಆದರೆ, ಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸಿಲ್ಲ. ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮೂಲ ಕಾರಣ ಎಂದರೆ ಅದು ಬಂಗಾರಪ್ಪ ಎಂಬುದು ರಾಜ್ಯದ ಜನತೆಗೂ ಹಾಗೂ ಬಿಜೆಪಿಯವರಿಗೂ ತಿಳಿದಿದೆ ಎಂದರು.
ಈ ವಿಷಯವನ್ನು ಪರಿಗಣಿಸಿ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡುವ ಮೂಲಕ ಬಂಗಾರಪ್ಪನವರಿಗೆ ಗೌರವ ನೀಡಬೇಕು. ಸರ್ಕಾರ ನಡವಳಿಕೆಗಳನ್ನು ನೋಡುತ್ತಿದ್ದರೆ ನಮ್ಮ ಸಮಾಜದ ನಾಯಕನನ್ನು ಕಡೆಗಣಿಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಆ ರೀತಿ ಆಗಬಾರದು ರಾಜ್ಯ ಸರ್ಕಾರ ಸದನದಲ್ಲಿ ವಿಮಾನ ನಿಲ್ದಾಣಕ್ಕೆ ಎಸ್.ಬಂಗಾರಪ್ಪನವರ ಹೆಸರನ್ನು ಅನುಮೂದಿಸಿ ಕೇಂದ್ರಕ್ಕೆ ಕಳುಹಿಸಬೇಕಂದು ಶ್ರೀಧರ್ ಹುಲ್ತಿಕೊಪ್ಪ ಒತ್ತಾಯಿಸಿದರು.
ನೂತನ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಸೂಚಿಸಿದ್ದ ಬಿ.ಎಸ್.ಯಡಿಯೂರಪ್ಪ: ಭಾನುವಾರ ಈ ವಿಷಯದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಹೆಸರಿಡುವಂತೆ ಸೂಚಿಸಿದ್ದರು.
ಸದನದಲ್ಲಿ ಈಗಾಗಲೇ ನಾನೇ ಈ ವಿಷಯ ಪ್ರಸ್ತಾಪಿಸಿ ಕೇಂದ್ರಕ್ಕೆ ಕಳುಹಿಸಿದ್ದೇನೆ. ಫೆ. 27ರಂದು ಪ್ರಧಾನಿಗಳಿಂದ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಮಾಡಿಸುತ್ತೇವೆ. ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಗಳು ಬರುವುದು ನಿಶ್ಚಿತ. ಅದೇ ದಿನ, ಇಪ್ಪತ್ತನೆೇ ಶತಮಾನ ಕಂಡ ಕವಿಸಂತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಕುವೆಂಪು ಅವರ ಹೆಸರನ್ನು ವಿಮಾನ ನಿಲ್ದಾಣಕ್ಕಿಡಲು ತೀರ್ಮಾನಿಸಿದ್ದೇವೆ. ಸರ್ವಾನುಮತದಿಂದ ತೀರ್ಮಾನಿಸಿ ಹೆಸರನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು.
ಇದನ್ನೂ ಓದಿ:ಟಿಪ್ಪು ಪೂಜಿಸುವವರು ಮನೆಯಲ್ಲಿರಬೇಕು, ಶಿವಪ್ಪನಾಯಕನನ್ನು ಪೂಜಿಸುವವರು ವಿಧಾನಸೌಧದಲ್ಲಿರಬೇಕು: ಕಟೀಲ್