ಶಿವಮೊಗ್ಗ: ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಇಂಜಿನಿಯರ್ಗಳ ನಿರ್ಲಕ್ಷ್ಯದಿಂದಾಗಿ ಅಡಕೆ ತೋಟದಲ್ಲಿ ನೀರು ನಿಂತು ಬೆಳೆ ನಾಶವಾಗುತ್ತಿವೆ.
ಜಿಲ್ಲೆಯ ದುಮ್ಮಳ್ಳಿಯ ರಸ್ತೆಯಲ್ಲಿನ ಭದ್ರಾ ಎಡದಂಡೆ ಕಾಲುವೆಯಿಂದ ಕಿರು ಕಾಲುವೆಗೆ ಹರಿಯುವ ನೀರು ತೋಟಕ್ಕೆ ನುಗ್ಗುತ್ತಿದೆ. ಪರಿಣಾಮ, ಈ ಭಾಗದ ನೂರಾರು ಎಕರೆ ಅಡಕೆ ತೋಟ ಹಾಗೂ ಭತ್ತದ ಗದ್ದೆಗಳು ಜಲಾವೃತವಾಗಿವೆ. ಕಿರುಕಾಲುವೆ ಪಕ್ಕದಲ್ಲಿನ ತೋಟಗಳು ಅಕ್ಷರಶಃ ಕೆರೆಯಂತಾಗಿವೆ.
ಮುಖ್ಯ ಕಾಲುವೆಯಿಂದ ಕಿರು ಕಾಲುವೆಗೆ ನೀರು ಹಾಯಿಸುವಾಗ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುತ್ತಿದೆ. ಇದರಿಂದ ಕಿರುಕಾಲುವೆಗಳು ಉಕ್ಕಿ ತೋಟಗಳಿಗೆ ನೀರು ನುಗ್ಗುತ್ತಿದೆ. ಕಳೆದ ಒಂದು ತಿಂಗಳಿಂದ ಅಡಕೆ ತೋಟದಲ್ಲಿ ನೀರು ಹರಿಯುತ್ತಿರುವುದರಿಂದ ಅಡಕೆ ಬೆಳೆ ತೆಗೆಯಲು ಆಗುತ್ತಿಲ್ಲ. ಅಲ್ಲದೇ, ತೋಟದಲ್ಲಿ ತೇವಾಂಶ ಹೆಚ್ಚಾಗಿ ಅಡಕೆ ಮರಗಳು ನಾಶವಾಗುವ ಭಯದಲ್ಲಿ ಈ ಭಾಗದ ರೈತರಿದ್ದಾರೆ.