ಶಿವಮೊಗ್ಗ: ಒಂದು ವರ್ಷದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆಗೆ ಈಗ ಬಂಪರ್ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ಗೆ ರೂ. 50 ಸಾವಿರದ ಕಡೆಗೆ ಮುನ್ನುಗ್ಗುತ್ತಿದೆ. ಇದರಿಂದ ಬೆಳೆಗಾರರು ಖುಷ್ ಆಗಿದ್ದಾರೆ.
ಮಲೆನಾಡಿನ ಪ್ರಮುಖ ಬೆಳೆಯಾಗಿರುವ ಅಡಿಕೆ ಈಗ ಬಯಲುಸೀಮೆಯಲ್ಲೂ ಪ್ರಸಿದ್ಧಿ ಪಡೆದಿದೆ. ಕಡಿಮೆ ಖರ್ಚು, ಹೆಚ್ಚು ಲಾಭದ ದೃಷ್ಟಿಯ ಕಾರಣದಿಂದ ಈಗ ಎಲ್ಲಿ ನೋಡಿದರೂ ಅಡಿಕೆ ತೋಟಗಳೇ ಕಾಣಸಿಗುತ್ತಿವೆ. ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಬೆಳೆ ಹೆಚ್ಚಾದರೂ ಬೆಲೆ ಮಾತ್ರ ಕುಗ್ಗಿಲ್ಲ.
ಬೆಲೆ ಏರಿಕೆಗೆ ಕಾರಣ: ಈಶಾನ್ಯ ಗಡಿರಾಜ್ಯಗಳಲ್ಲಿ ಸಂಘರ್ಷ ಏರ್ಪಟ್ಟಿರುವುದರಿಂದ ಕೇಂದ್ರ ಸರ್ಕಾರ ಗಡಿಗಳನ್ನು ಬ್ಲಾಕ್ ಮಾಡಿದೆ. ಹಾಗಾಗಿ ಇಂಡೋನೇಷಿಯಾ, ಮಲೇಷಿಯಾ ದೇಶಗಳಿಂದ ಬರುತ್ತಿದ್ದ ಕಳಪೆ ಅಡಿಕೆ ನಿಂತಿದೆ. ಈ ಬೆಳೆಯ ಮೇಲೆ ಕೆಲ ಗುಟ್ಕಾ ಕಂಪನಿಗಳು ಅವಲಂಬಿತವಾಗಿವೆ. ಈಗ ಗಡಿಗಳು ಬ್ಲಾಕ್ ಆಗಿರುವುದರಿಂದ ರೈತರಿಂದಲೇ ನೇರ ಖರೀದಿ ಮಾಡುತ್ತಿವೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.
ಇಷ್ಟೊತ್ತಿಗಾಗಲೇ ಹೊಸ ಅಡಿಕೆ ಮಾರುಕಟ್ಟೆ ಪ್ರವೇಶ ಮಾಡಬೇಕಿತ್ತು. ಮಳೆ ಕಾರಣದಿಂದ ಕೊಯ್ಲು, ಸಂಸ್ಕರಣೆ ಸೇರಿದಂತೆ ಎಲ್ಲಾ ಕೆಲಸಗಳು ನಿಧಾನವಾಗಿದ್ದು ಹೆಚ್ಚು ಸಂಗ್ರಹವಾಗುತ್ತಿಲ್ಲ. ಮೂರು ವರ್ಷದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕೊಳೆರೋಗ ಬಾಧಿಸುತ್ತಿದೆ. ಇದು ಸಹ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ಉತ್ತಮ ಬೆಳವಣಿಗೆಯಲ್ಲ: ಇತ್ತೀಚೆಗೆ ರೈತರು ಅಡಿಕೆ ದಾಸ್ತಾನು ಮಾಡುವ ಸೌಲಭ್ಯ ಹೊಂದಿದ್ದು, ತಮಗೆ ಅನುಕೂಲಕರ ಸಮಯಕ್ಕೆ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ದಿಢೀರ್ ಬೆಲೆ ಏರಿಕೆ ಲಾಭ ಪಡೆಯುವ ಉದ್ದೇಶದಿಂದ ಅಕ್ರಮ-ಸಕ್ರಮ ವ್ಯವಹಾರಸ್ಥರಲ್ಲಿ ಪೈಪೋಟಿ ಏರ್ಪಟ್ಟಿರುವುದರಿಂದ ಬೆಲೆ ಏರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂಬುದು ಪಕ್ಕಾ ವ್ಯವಹಾರಸ್ಥರ ಅಭಿಪ್ರಾಯ.
ಫೆಬ್ರವರಿ 2020ರಲ್ಲಿ 39 ಸಾವಿರ ಆಸುಪಾಸಿನಲ್ಲಿದ್ದ ಅಡಿಕೆ ಕೆಲವೇ ತಿಂಗಳಲ್ಲಿ 42, 43 ಸಾವಿರಕ್ಕೆ ಸ್ಥಿರಗೊಂಡಿತು. 2021ರ ಆಗಸ್ಟ್ ವರೆಗೂ 38 ರಿಂದ 43 ಸಾವಿರವರೆಗೆ ಬೆಲೆ ಕಾಯ್ದುಕೊಂಡಿದೆ. ಆ. 10ರ ರಾಶಿಯ ಗರಿಷ್ಠ ಬೆಲೆ 44,099, 16ರಂದು 44,299 ರೂ, 19ರಂದು 44,099 ರೂ, 24ರಂದು 46,599 ರೂ, 25ರಂದು 47,500 ರೂ.ಗೆ ವಹಿವಾಟು ನಡೆದಿದೆ. ರೈತರಿಂದ ನೇರವಾಗಿ ಖರೀದಿಸುವ ವ್ಯವಹಾರಸ್ಥರು 49 ಸಾವಿರಕ್ಕೆ ಖರೀದಿ ಮಾಡಿ ದಾಖಲೆ ಬರೆದಿದ್ದಾರೆ.
ಎಲ್ಲರಿಗೂ ದೊಡ್ಡ ನಷ್ಟ: ಬೆಲೆ ಏರಿಕೆಯು ಒಂದೆಡೆ ಖುಷಿಯ ವಿಚಾರವಾಗಿದ್ದರೆ, ಇನ್ನೊಂದೆಡೆ ವ್ಯಾಪಾರಸ್ಥರಲ್ಲಿ ಆತಂಕ ಹುಟ್ಟಿಸುತ್ತಿದೆ. 43 ಸಾವಿರಕ್ಕೆ ಖರೀದಿ ಮಾಡಿದ ಅಡಿಕೆ 48 ಸಾವಿರಕ್ಕೆ ಬಿಕರಿಯಾದರೆ ಲಾಭವಾಗುತ್ತದೆ. ಅದೇ 49 ಸಾವಿರಕ್ಕೆ ಖರೀದಿ ಮಾಡಿದ ಅಡಿಕೆ 43 ಸಾವಿರಕ್ಕೆ ಬಿಕರಿಯಾದರೆ ದೊಡ್ಡ ನಷ್ಟವಾಗಲಿದೆ. ಮಾರುಕಟ್ಟೆ ಬೆಲೆ ಸ್ಥಿರತೆ ಕಾಪಾಡಿಕೊಳ್ಳದಿದ್ದರೆ ಎಲ್ಲರಿಗೂ ದೊಡ್ಡ ನಷ್ಟವಾಗಲಿದೆ.
2014 ರಲ್ಲಿ 18 ಸಾವಿರ ಇದ್ದ ಅಡಿಕೆ ಬೆಲೆ 90 ಸಾವಿರದವರೆಗೂ ಏರಿಕೆಯಾಗಿತ್ತು. ಒಂದೇ ಬಾರಿ ಮಾರುಕಟ್ಟೆ ಬಿದ್ದು ಅನೇಕ ವ್ಯಾಪಾರಿಗಳು ಬೀದಿಪಾಲಾದರು. ಹಾಗಾಗಿ, ಅಡಿಕೆ ಧಾರಣೆ ಏರಿಕೆ ಒಂದೆಡೆ ಸಂತಸ ಮೂಡಿಸಿದ್ದರೆ, ಮತ್ತೊಂದೆಡೆ ಮುಂದಿನ ವಹಿವಾಟು ಕುರಿತು ಆತಂಕವನ್ನು ಸಹ ಮೂಡಿಸಿದೆ.
ಓದಿ: ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಇಂದು ರಾತ್ರಿ ಬೆಂಗಳೂರಿಗೆ ಸಿಎಂ ವಾಪಸ್