ಶಿವಮೊಗ್ಗ: ರಾತ್ರಿ ವೇಳೆ ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಳ್ಳಿ ಧರೆಗುಂಡಿ ಬಳಿಯ ಅರಣ್ಯ ಪ್ರದೇಶದಲ್ಲಿ ದೀಲಿಪ ಎಂಬಾತ ಕಡವೆ ಬೇಟೆಯಾಡಿದ್ದಾನೆ. ಈ ವೇಳೆ ರಾತ್ರಿ ಗಸ್ತಿಗೆ ಬಂದಿದ್ದ ಆರ್ಎಫ್ಓ ಉಮಾರವರನ್ನು ಕಂಡ ಕೂಡಲೇ ಆರೋಪಿ ಅಲ್ಲಿಂದ ತನ್ನ ಮಾರುತಿ ಓಮ್ನಿ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಉಮಾ ಅವರು ದಿಲೀಪನನ್ನು ಹಿಂಬಾಲಿಸಿ ಹೋಗಿ ಹಿಡಿದಿದ್ದಾರೆ. ಈ ವೇಳೆ ಆತನ ಬಳಿ ಇದ್ದ ಒಂದು ಕೋವಿ ಹಾಗೂ ಅರಣ್ಯ ಪ್ರದೇಶದಲ್ಲಿದ್ದ ಕಡವೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಇದೇ ರೀತಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಎನ್ನಲಾಗಿದೆ.
ಈಗಾಗಲೇ ಅರಣ್ಯ ಪ್ರದೇಶ ಕಡಿಮೆಯಾಗಿ ಕಾಡು ಪ್ರಾಣಿಗಳ ಸಂತತಿ ಕ್ಷೀಣಿಸುತ್ತಿದೆ. ಇದು ನಕ್ಸಲ್ ಭಾದಿತ ಪ್ರದೇಶವಾಗಿದ್ದು, ದಶಕಗಳಿಂದ ಇಲ್ಲಿ ನಕ್ಸಲರು ಕೋವಿ ಹಿಡಿದು ಓಡಾಡಿದ್ದರು. ಈಗ ನಕ್ಸಲರ ಸಂಚಾರ ಕಡಿಮೆಯಾಗಿದೆ. ಆದ್ರೆ ಬೇಟೆಗಾರರ ಸಂಖ್ಯೆ ಹೆಚ್ಚಾಗಿದೆ. ಗ್ರಾಮಸ್ಥರಲ್ಲಿ ಇವರು ನಕ್ಸಲರೋ, ಬೇಟೆಗಾರರೋ ಎಂಬ ಪ್ರಶ್ನೆ ಕಾಡುತ್ತಿದ್ದು, ಭಯದಲ್ಲಿ ಬದುಕುವಂತಾಗಿದೆ.