ಶಿವಮೊಗ್ಗ: ತಲಕಾವೇರಿಯನ್ನು ಅಭಿವೃದ್ಧಿ ಪಡಿಸಿದ ಮಾದರಿಯಲ್ಲಿ ಶರಾವತಿ ನದಿಯ ಉಗಮಸ್ಥಾನವಾದ ಅಂಬುತೀರ್ಥವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಇಂದು ಶರಾವತಿ ನದಿ ಮೂಲಸ್ಥಾನ ಅಂಬುತೀರ್ಥದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರುಗಳೊಂದಿಗೆ ಕಾರ್ಯಕ್ರಮದ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಈ ಪವಿತ್ರಸ್ಥಳವನ್ನು ಅಭಿವೃದ್ಧಿ ಪಡಿಸುವ ಕರ್ತವ್ಯ ಸರ್ಕಾರದ್ದು. ಅಂಬುತೀರ್ಥವನ್ನು ಅಭಿವೃದ್ಧಿ ಪಡಿಸುವ ಸೌಭಾಗ್ಯ ನಮ್ಮ ಸರ್ಕಾರಕ್ಕೆ ಸಿಕ್ಕಿದ್ದು ಸಂತಸ ಎಂದು ಭಾವಿಸುತ್ತೇನೆ. ಭಕ್ತರ ಆಶಯದಂತೆ ಶಿಲಾಮಯವಾಗಿ ದೇವಾಲಯವನ್ನು ಅಭಿವೃದ್ಧಿಪಡಿಸಿ ಮಾದರಿ ಪುಣ್ಯಕ್ಷೇತ್ರವಾಗಿ ಮಾಡಲಿದ್ದೇವೆ ಎಂದರು.
ನಂತರ ಮಾತನಾಡಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಂಬುತೀರ್ಥ ಕ್ಷೇತ್ರದ ಅಭಿವೃದ್ಧಿಗೆ ಸಚಿವರು ನಮ್ಮ ಇಲಾಖೆ ವತಿಯಿಂದ ಒಂದು ಕೋಟಿ ನೀಡುವಂತೆ ಮನವಿ ಮಾಡಿದ್ದಾರೆ ಆ ಒಂದು ಕೋಟಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಂತರದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸಹ್ಯಾದ್ರಿ ಪ್ರಾಧಿಕಾರದ ವತಿಯಿಂದ 10 ಕೋಟಿ ವೆಚ್ಚದಲ್ಲಿ ವಿವಿಧ ದೇವಾಲಯಗಳ ಅಭಿವೃದ್ಧಿ ಪಡೆಸಲಾಗುತ್ತಿದೆ. ಅದರಂತೆ ಇಂದು 1.80 ಕೋಟಿ ವೆಚ್ಚದಲ್ಲಿ ಶರಾವತಿ ನದಿಯ ಉಗಮಸ್ಥಾನದ ಶಂಕುಸ್ಥಾಪನೆ ಮಾಡಲಾಗಿದೆ. ಮಲೆನಾಡಿನ ವಾಸ್ತುಶಿಲ್ಪ ಶೈಲಿಯಲ್ಲಿ ದೇವಸ್ಥಾನ ನಿರ್ಮಾಣ ವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ ,ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಉಪಸ್ಥಿತರಿದ್ದರು.