ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕ್ಷೇತ್ರದಲ್ಲಿನ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಶಿಕಾರಿಪುರ ತಾಲೂಕು ಆಸ್ಪತ್ರೆಯ ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡದೆ ಚೆಸ್ ಆಡುವುದರಲ್ಲಿ ಮಗ್ನರಾಗಿರುತ್ತಾರೆ ಎಂಬ ದೂರು ಕ್ಷೇತ್ರದ ಜನರದ್ದಾಗಿದೆ.
ಈ ಆಸ್ಪತ್ರೆಗೆ ಶಿಕಾರಿಪುರ ತಾಲೂಕಿನಿಂದ ಮಾತ್ರವಲ್ಲದೆ, ಸೊರಬ ತಾಲೂಕಿನ ರೋಗಿಗಳೂ ಬರುತ್ತಾರೆ. ಆದರೆ ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡದೆ ರೋಗಿಗಳನ್ನು ಅಲೆದಾಡಿಸುವುದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಇಲ್ಲಿನ ವಯದ್ಯರು ಕಳಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿನ ವೈದ್ಯರು ತಮ್ಮದೇ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಎಕ್ಸ್- ರೇ ಮಾಡದೆ, ಖಾಸಗಿ ಲ್ಯಾಬ್ಗೆ ಕಳುಹಿಸುತ್ತಿದ್ದಾರೆ ಎಂಬ ಆರೋಪವಿದೆ. ಇಲ್ಲಿ ವೈದ್ಯರು ಸೇರಿದಂತೆ, ಇಲ್ಲಿನ ಸಿಬ್ಬಂದಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಬಾರದೆ ರೋಗಿಗಳಿಗೆ ಕಾಯಿಸುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಆಸ್ಪತ್ರೆಯನ್ನು ಸರಿಯಾಗಿ ನಡೆಸಿಕೊಂಡು ಹೋಗಬೇಕಾದ ವೈದ್ಯಾಧಿಕಾರಿ ಡಾ.ಶಿವಾನಂದ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇಲ್ಲಿನ ಡಾ.ಗೊಪಾಲ್ ಹರಗಿ ಅವರು ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಕ್ಲಿನಿಕ್ ನಲ್ಲಿಯೇ ಹೆಚ್ಚು ಕಾಲ ಇರುತ್ತಾರೆ. ಲಂಚ ಪಡೆದು 48 ವರ್ಷದ ವ್ಯಕ್ತಿಗೆ 60 ವರ್ಷ ಎಂದು ದೃಢೀಕರಣ ಕರಣ ಪತ್ರ ನೀಡಿದ್ದಾರೆ ಎಂಬ ಗಂಭೀರ ಆರೋಪ ಸಹ ಕೇಳಿ ಬಂದಿದೆ.
ದೂರು ನೀಡಿದ್ರೂ ಕ್ರಮವಿಲ್ಲ:
ಶಿಕಾರಿಪುರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸರಿಯಾಗಿ ಕರ್ತವ್ಯಕ್ಕೆ ಬರದೆ, ಕೇವಲ ಲಂಚಕ್ಕಾಗಿ ಕೈ ಚಾಚುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಾಗೂ ಶಾಸಕರಿಗೆ, ಸಂಸದರಿಗೆ ದೂರು ನೀಡಿದ್ರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಶಿಕಾರಿಪುರ ಭ್ರಷ್ಟಾಚಾರ ವಿರೋಧಿ ವೇದಿಕೆ ಆರೋಪಿಸಿದೆ.