ಶಿವಮೊಗ್ಗ: ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಸಲೂನ್ ಮಾಲೀಕರನ್ನು ಬಂಧಿಸಿ, 6 ಜನ ಮಹಿಳೆಯರನ್ನು ಮಹಿಳಾ ಪೊಲೀಸರು ರಕ್ಷಿಸಿ, ದಂಧೆ ನಡೆಸುತ್ತಿದ್ದ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ನಗರದ ಕುವೆಂಪು ರಸ್ತೆಯ ಸಾಯಿ ಆರ್ಕೇಡ್ ಕಟ್ಟಡದ ರಾಯಲ್ ಆರ್ಚ್ ಫ್ಯಾಮಿಲಿ ಸಲೂನ್ ಮತ್ತು ಸ್ಪಾನಲ್ಲಿ ಸ್ಪಾ ಹೆಸರಿನಲ್ಲಿ ಮಹಿಳೆಯನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಸ್ಪಾ ನಲ್ಲಿ 6 ಜನ ಯುವತಿಯರನ್ನು ರಕ್ಷಿಸಿದ್ದಾರೆ.
ರಕ್ಷಿಸಲಾದ 6 ಜನ ಮಹಿಳೆಯರಿಗೆ ಸ್ಪಾ ಮಾಲೀಕರಾದ ಗೋಪಾಲ್ ವೈ ಮತ್ತು ವಿದ್ಯಾಶ್ರೀ ಅವರು ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ರಕ್ಷಿಸಲ್ಪಟ್ಟ ಎಲ್ಲಾ ಮಹಿಳೆಯರು ಬೇರೆ ಬೇರೆ ರಾಜ್ಯದವರು ಎಂದು ತಿಳಿದು ಬಂದಿದೆ. ರಾಯಲ್ ಆರ್ಚ್ ಫ್ಯಾಮಿಲಿ ಸಲೂನ್ ಮತ್ತು ಸ್ಪಾ 15 ದಿನದ ಹಿಂದೆ ಪ್ರಾರಂಭವಾಗಿತ್ತು. ಸ್ಪಾ ಪ್ರಾರಂಭದಿಂದಲೂ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಂಧೆ ಕುರಿತು ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಈ ಕುರಿತು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತ ದಂಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಸಿಬ್ಬಂದಿ ಮಾಹತಿ ನೀಡಿದ್ದಾರೆ.
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ನಡೆದಿತ್ತು ವೇಶ್ಯಾವಾಟಿಕೆ : ಈ ಹಿಂದೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ 8 ಮಂದಿ ವಿದೇಶಿಗರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಕೆಂಗೇರಿ ಹಾಗೂ ಸೋಲದೇವನಹಳ್ಳಿಯ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿ, ಇಬ್ಬರು ಮಹಿಳೆಯರು ಹಾಗೂ ಆರು ಜನ ಪುರುಷರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ವಿದೇಶಿಗರಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ಕೆಂಗೇರಿ ಮತ್ತು ಸೊಲದೇವನಹಳ್ಳಿಯ ಎರಡು ಕಡೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ವಶಕ್ಕೆ ಪಡೆದ ಎಂಟು ಜನ ಆರೋಪಿಗಳನ್ನು ಪ್ರಾಥಮಿಕವಾಗಿ ವಿಚಾರಣೆ ನಡೆಸಿದಾಗ ತಾವು ಭಾರತದ ನಿವಾಸಿಗಳೇ ಎಂಬುದನ್ನು ತಿಳಿಸಿದ್ದರು.
ಪಶ್ಚಿಮ ಬಂಗಾಳ ಮತ್ತು ತ್ರಿಪುರದ ಆಧಾರ್ ಕಾರ್ಡ್ಸ್, ಬಾಂಗ್ಲಾದೇಶದ ಕೋವಿಡ್ ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ಮತ್ತು ಕೆಲ ದಾಖಲೆಗಳು ದೊರೆತಿವೆ. ಆರೋಪಿಗಳು ಅಕ್ರಮ ವಲಸೆ ಬಂದವರು ಎಂಬ ಅನುಮಾನವಿದ್ದು, ತನಿಖೆ ಮಾಡಲಾಗ್ತಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಡಾ.ಎಸ್.ಡಿ. ಶರಣಪ್ಪ ಮಾಹಿತಿ ನೀಡಿದ್ದರು
ಮತ್ತೊಂದೆಡೆ ಮಂಗಳೂರಿನಲ್ಲೂ ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಓರ್ವ ಮಹಿಳೆ ಸೇರಿ ಇಬ್ಬರು ದಲ್ಲಾಳಿಗಳನ್ನು ನಗರದ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಉಳಿಯಾರಗೋಳಿಯ ಅಬ್ದುಲ್ ಹಫೀಸ್ (55) ಮತ್ತು ಸುರತ್ಕಲ್ನ ಕಾಟಿಪಳ್ಳ ಕೃಷ್ಣಾಪುರದ ರಮ್ಲಾತ್ (46) ಎಂಬುವರನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದರು.
ಆರೋಪಿಗಳು ಕೆಲ ದಿನಗಳ ಹಿಂದೆ ಕಾವೂರು ಪರಿಸರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು ಸೇರಿ ಹಲವು ಕಡೆಗಳಿಂದ ಯುವತಿಯರನ್ನು ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ : ಇಬ್ಬರು ದಲ್ಲಾಳಿಗಳ ಬಂಧನ