ಶಿವಮೊಗ್ಗ: ಮಹಾನಗರ ಪಾಲಿಕೆಯಾಗಿ 6 ವರ್ಷ ಕಳೆದರೂ ನಗರದಲ್ಲಿ ಅಸ್ವಚ್ಛತೆ ಕಾಡುತ್ತಿದೆ. ಎಲ್ಲಿ ನೋಡಿದರಲ್ಲಿ ಕಸದ ರಾಶಿ. ಸ್ವೀಪಿಂಗ್ ಮಷಿನ್ (ಕಸ ಗುಡಿಸುವ ಯಂತ್ರ) ಬಳಸಲು ಅವಕಾಶವಿದ್ದರೂ ಈಗಲೂ ಕೈ ಮೂಲಕವೇ ಕಸ ಗುಡಿಸಲಾಗುತ್ತಿದೆ ಎನ್ನಲಾಗಿದೆ.
ಪಾಲಿಕೆಯಲ್ಲಿ 35 ವಾರ್ಡ್ಗಳಿದ್ದು, ಎಪಿಎಂಸಿ ಮಾರುಕಟ್ಟೆ, ಗಾಂಧಿ ಬಜಾರ್ ಸೇರಿದಂತೆ ಹಲವೆಡೆ ಕಸ ಶಿಖರದೆತ್ತರ ಕಂಡು ಬರುತ್ತಿದ್ದು, ಕಸ ವಿಲೇವಾರಿ ಅಷ್ಟಕ್ಕಷ್ಟೇ ಎಂಬಂತಾಗಿದೆ. ಪಾಲಿಕೆಯಲ್ಲಿ 518 ಪೌರಕಾರ್ಮಿಕರು ಸೇವೆಯಲ್ಲಿ ಇರಬೇಕಿತ್ತು. ಆದರೆ 392 ಮಂದಿ ಮಾತ್ರ ಲಭ್ಯವಿದ್ದು, 126 ಹುದ್ದೆಗಳು ಖಾಲಿಯಿವೆಯಂತೆ.
ಕಸಗುಡಿಸಲು ಪಾಲಿಕೆ ವ್ಯಾಪ್ತಿಯಡಿ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ. ಮೊದಲು ಒಂದು ಯಂತ್ರ ಬಳಸಕೊಳ್ಳಲಾಗಿತ್ತು. ಅದು ಬೇಗನೆ ರಿಪೇರಿಗೆ ಬಂದು ಮೂಲೆ ಸೇರಿತು. ನಂತರ ಅದರ ದುರಸ್ತಿಗೆ ಮುಂದಾದಾಗ ಹೊಸ ಯಂತ್ರಕ್ಕಿಂತ ದುಬಾರಿ ಎನಿಸಿತು. ಪರಿಣಾಮ ಕಸಗುಡಿಸುವ ಯಂತ್ರವನ್ನು ಹಾಗೆಯೇ ಬಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕಸಗುಡಿಸುವ ಯಂತ್ರಗಳನ್ನು ಅದರ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ತಂದ ಯಂತ್ರ ಗುಜರಿ ಸೇರಿದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ಸದ್ಯಕ್ಕೀಗ ಪಾಲಿಕೆಯಲ್ಲಿ ಒಂದೂ ಕಸ ಗುಡಿಸುವ ಯಂತ್ರವೂ ಇಲ್ಲದಂತಾಗಿದೆ ಎಂದು ಸ್ಥಳೀಯ ಗೌಸ್ ಪೀರ್ ಹೇಳಿದರು. ಈ ಮೂಲಕ ಕಸ ಗುಡಿಸುವ ಮತ್ತು ಪೌರಕಾರ್ಮಿಕರ ನೇಮಕಕ್ಕೆ ಪಾಲಿಕೆ ನಿರಾಸಕ್ತಿ ತೋರುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.