ಶಿವಮೊಗ್ಗ: ಮಗಳ ಮದುವೆಗೆಂದು ಮನೆ ಎದುರಿನ ಜಾಗ ಸ್ವಚ್ಛಗೊಳಿಸಲು ಹೋದವರ ಮೇಲೆ ಪಕ್ಕದ ಮನೆಯವರು ಹಲ್ಲೆ ನಡೆಸಿದ ಪರಿಣಾಮ ಯುವತಿಯ ತಂದೆ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕು ಕಂಬ್ಳಿಗೆರೆ ಗ್ರಾಮದಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕಂಬ್ಳಿಗೆರೆಯ ನಿವಾಸಿ ಜ್ಞಾನೇಂದ್ರ ಎಂಬುವರು ತಮ್ಮ ಮಗಳ ಮದುವೆ ಇರುವುದರಿಂದ ಮನೆ ಮುಂದಿನ ಜಾಗವನ್ನ ಸ್ವಚ್ಛಗೊಳಿಸುವಾಗ ಪಕ್ಕದ ಮನೆಯ ಶಿವಣ್ಣ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಜ್ಞಾನೇಂದ್ರ ಹಠಾತ್ ಕುಸಿದು ಬಿದ್ದಿದ್ದಾರೆ.
ತಕ್ಷಣ ಜ್ಞಾನೇಂದ್ರನನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿತ್ತು. ಆದ್ರೆ ಮಾರ್ಗ ಮಧ್ಯದಲ್ಲೇ ಜ್ಞಾನೇಂದ್ರ ಸಾವನ್ನಪ್ಪಿದ್ದಾರೆ. ಕೆಲವರು ಜ್ಞಾನೇಂದ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ರೆ, ಇನ್ನೂ ಕೆಲವರು ಶಿವಣ್ಣ ಮತ್ತು ಆತನ ಕುಟುಂಬಸ್ಥರು ನಡೆಸಿದ ಹಲ್ಲೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಶವ ಪರೀಕ್ಷೆಯ ನಂತರ ಸತ್ಯ ಹೊರಬರಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಸದ್ಯ ಆರೋಪಿ ಶಿವಣ್ಣ ಪೊಲೀಸ್ ವಶದಲ್ಲಿದ್ದಾನೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.