ಶಿವಮೊಗ್ಗ : ಸಾಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 5 ಕೆಜಿ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
ಸೊರಬ ತಾಲೂಕು ಆನವಟ್ಟಿ ಮೂಲದ 50 ವರ್ಷದ ಮಹಿಳೆ ಹೊಟ್ಟೆ ನೋವು ಎಂದು ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ನಾಗೇಂದ್ರಪ್ಪನವರು ಸ್ಕ್ಯಾನಿಂಗ್ ಮಾಡಿದಾಗ ಮಹಿಳೆಯ ಅಂಡಾಶಯದಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ. ತಕ್ಷಣ ಆಪರೇಷನ್ ಮಾಡಿ 5 ಕೆಜಿ ಗೆಡ್ಡೆಯನ್ನು ಹೊರ ತೆಗೆದಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶ, ಅಂಡಾಶಯಗಳಲ್ಲಿ ಗಡ್ಡೆಯು ಅರ್ಧ ಕೆಜಿಯಷ್ಟು ಮಾತ್ರ ಇರುತ್ತೆ. ಆದರೆ, ಅಚ್ಚರಿ ಎಂಬಂತೆ ಮಹಿಳೆಯ ಹೊಟ್ಟೆಯಲ್ಲಿ 5 ಕೆಜಿ ಗೆಡ್ಡೆ ಪತ್ತೆಯಾಗಿದೆ. ಮಹಿಳೆ ಒಂದೆರಡು ದಿನ ತಡವಾಗಿ ಬಂದಿದ್ರೆ ಆಕೆಯ ಜೀವಕ್ಕೆ ಹಾನಿಯಾಗುತ್ತಿತ್ತು ಎಂದು ವೈದ್ಯರು ಇದೇ ವೇಳೆ ತಿಳಿಸಿದ್ದಾರೆ.
ಡಾ.ನಾಗೇಂದ್ರಪ್ಪನವರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಮಹಿಳೆಯ ಸಂಬಂಧಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಶಸ್ತ್ರ ಚಿಕಿತ್ಸೆಯಲ್ಲಿ ಅರವಳಿಕೆ ತಜ್ಞ ಡಾ. ಶ್ರೀಧರ್, ನರ್ಸ್ ನಾಗರತ್ನ, ವಿನಾಯಕ್, ಮಂಜು ಸಹಾಯಕರಾಗಿದ್ದರು.