ಶಿವಮೊಗ್ಗ : ಕೋವಿಡ್ ಲಾಕ್ಡೌನ್ನಿಂದ ಅರ್ಥಿಕವಾಗಿ ಸಂಕಷ್ಟಕ್ಕೊಳಗಾದ ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ. ನೆರವು ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 1,07,286 ಕಾರ್ಮಿಕ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಲಾಗುತ್ತಿದೆ ಎಂದಿದ್ದಾರೆ.
ಯಾರ ಖಾತೆಗೆ ಹಣ ಜಮಾವಣೆ ಆಗಿಲ್ಲವೂ ಅವರು ಬ್ಯಾಂಕ್‌ಗೆ ಹೋಗಿ ಆಧಾರ್ ಲಿಂಕ್ ಮಾಡಬೇಕು. ಜಿಲ್ಲೆಯಲ್ಲಿ ಈಗಾಗಲೇ 72,065 ಕಾರ್ಮಿಕರ ಖಾತೆಗೆ ಒಟ್ಟು 21.61 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಇದರಲ್ಲಿ 11,040 ಕಾರ್ಮಿಕರಿಗೆ ಜಮೆಗೊಳಿಸಲಾದ ಮೊತ್ತ ಅವರ ಖಾತೆಗಳು ನಿಷ್ಕ್ರೀಯವಾಗಿರುವುದರಿಂದ ಹಾಗೂ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಮಾಡಿಸದೆ ಇರುವುದರಿಂದ 3.31 ಕೋಟಿ ರೂ. ಇನ್ನೂ ಜಮೆ ಆಗಿಲ್ಲ ಎಂದು ಮಾಹಿತಿ ನೀಡಿದರು.
ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ
ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿವತಿಯಿಂದ ಕಾರ್ಮಿಕರ ನೆರವಿಗೆ ಹಲವು ಸೌಲಭ್ಯ ಒದಗಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಂಕಷ್ಟಕ್ಕೀಡಾದ ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಗುವುದು ಎಂದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 32 ವಾರ್ಡ್ಗಳಲ್ಲಿ 10,850 ಫಲಾನುಭವಿಗಳಿಗೆ ಸೋಮವಾರ ಅಯಾ ವಾರ್ಡ್ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲಾಗುವುದು ಎಂದರು.
ಫಲಾನುಭವಿಗಳು ಕಾರ್ಮಿಕರ ಕಾರ್ಡ್ ಹಾಗೂ ಆಧಾರ ಕಾರ್ಡ್ ತಂದು ವಿತರಣಾ ಕೇಂದ್ರದಲ್ಲಿ ಟೋಕನ್ ಪಡೆದು ಮರುದಿನ ಆಹಾರದ ಕಿಟ್ ವಿತರಿಸಲಾಗುವುದು ಎಂದರು. ಕಿಟ್ ವಿತರಣೆಗಾಗಿ 9 ತಂಡಗಳನ್ನು ರಚಿಸಲಾಗಿದೆ. 32 ಕೇಂದ್ರಗಳಲ್ಲಿ ನೋಡೆಲ್ ಅಧಿಕಾರಿಗಳ ನೇತೃತ್ವದಲ್ಲಿ ವಿತರಣೆ ಮಾಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ
ಕೇಂದ್ರದ ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಕರ್ನಾಟಕದ 6 ಸಂಸದರಿಗೆ ಸಚಿವ ಸ್ಥಾನ ನೀಡಿರುವುದು ಒಳ್ಳೆಯ ಬೆಳವಣಿಗೆ. ಸ್ವಾತಂತ್ರ್ಯ ನಂತರದ ಮಂತ್ರಿ ಮಂಡಲದಲ್ಲಿ ಕರ್ನಾಟಕಕ್ಕೆ ಇಷ್ಟೊಂದು ಸಚಿವ ಸ್ಥಾನ ನೀಡಿರಲಿಲ್ಲ. ಇದರಿಂದ ಅಭಿನಂದನೆ ಸಲ್ಲಿಸಬೇಕಾಗುತ್ತದೆ ಎಂದರು. ನರೇಂದ್ರ ಮೋದಿ ಅವರ 81 ಜನ ಸಚಿವ ಸಂಪುಟದಲ್ಲಿ 47 ಜನ ಎಸ್ಸಿ/ಎಸ್ಟಿ ಹಾಗೂ ಓಬಿಸಿ ಅವರಿಗೆ 47 ಮಂತ್ರಿ ಸ್ಥಾನ ನೀಡಲಾಗಿದೆ.
60 ವರ್ಷದ ಒಳಗಿನವರಿಗೆ ಹಾಗೂ ಹೆಚ್ಚಾಗಿ ಯುವಕರಿಗೆ ಆದ್ಯತೆ ನೀಡಲಾಗಿದೆ. 11 ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿ 5 ಜನ ಅಲ್ಪಸಂಖ್ಯಾತರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿದ್ದಾರೆ. ಈ ಮೂಲಕ ಎಲ್ಲಾ ವರ್ಗದವರಿಗೆ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.